ಪುಟ:Mahakhshatriya.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೀಕ್ಷಿತರಾಗಿರುವ ಸಪ್ತರ್ಷಿಗಳು ಬಂದು ಒಂದು ಪಲ್ಲಕ್ಕಿಯಲ್ಲಿ ಇಂದ್ರನನ್ನು ಕುಳ್ಳಿರಿಸಿ ತಾವು ಅದರ ವಾಹಕರಾಗುವರು. ಆದರೆ ಇಂದ್ರನು ಸಪ್ತರ್ಷಿಗಳ ಯೋಗ್ಯತೆಯನ್ನೂ ಗೌರವವನ್ನೂ ಪೂಜಿಸಿ, ಆ ಪಲ್ಲಕ್ಕಿಯನ್ನು ಏರಿದಂತೆ ಮಾಡಿ, ಅಲ್ಲಿಗೇ ಬಿಡುವನು. ಅದಕ್ಕಿಂತ ಹೆಚ್ಚಿನ ಗೌರವವು ಇಂದ್ರನಿಗಿಲ್ಲ !”

“ಎಂದರೆ, ಐರಾವತ, ಉಚ್ಚೈಃಶ್ರವ, ಇವುಗಳಿಗಿಂತ ಇಂದ್ರಸಿಂಹಾಸನಕ್ಕಿಂತ ಅದು ಹೆಚ್ಚಿನ ಮರ್ಯಾದೆಯೆಂದು ತಮ್ಮಭಿಪ್ರಾಯವೆ ?”

“ಹೌದು, ಸಂದೇಹವಿಲ್ಲ. ಆದರೆ, ಇಂದ್ರನು ಅದನ್ನು ಉಪಯೋಗಿಸದೆಯೇ ಗೌರವಿಸುತ್ತಿದ್ದನು.”

“ಕಾರಣವೇನು ?”

“ದೇವ, ತಾವು ತಿಳಿಯದ್ದು ಏನುಂಟು ? ಭೋಗ ಭೋಗವೂ ಅನುಭವಿಸಿದಂತೆಲ್ಲ ಕರ್ತನ ತೇಜಸ್ಸನ್ನು ತಿನ್ನುವುದು. ಅದರೊಳಗೂ ದೇವಲೋಕದಲ್ಲಂತೂ ಆ ದೇವತೆಗಳಿಗೆ ಅದು ತಪ್ಪಿದ್ದೇ ಅಲ್ಲ. ಈ ಸಪ್ತರ್ಷಿಶಿಬಿಕವು ಇತರ ಭೋಗಗಳಂತೆ ದೇವತೆಗಳಿಗೂ ತೇಜೋಹಾನಿಯನ್ನುಂಟು ಮಾಡುವುದು. ಅದರಿಂದ, ಇಂದ್ರನೂ ಅದಕ್ಕೆ ಹೆದರುವನು.”

“ದೇವಿ, ತಾವು ದೇವಸಾಮ್ರಾಜ್ಞಿಯರು. ಅದರಿಂದ ಕೇಳುವೆನು. ನನಗೆ ತಿಳಿಯುವಂತೆ ಹೇಳಿ, ಪ್ರತಿಯೊಂದು ಕರ್ಮವೂ ಅಧಿಯಜ್ಞ ಅಧಿದೈವ ಆದಾಗ, ತೇಜೋಹಾನಿಯಾಗದೆ ತೇಜೋವೃದ್ಧಿಯಾಗುವುದಲ್ಲವೆ ?”

“ಮಿಕ್ಕೆಲ್ಲ ಕರ್ಮಗಳೂ, ಇಂದ್ರಿಯ ಕರ್ಮಗಳೂ ಸಹ, ಹಾಗೆ ಆಗುವುದನ್ನು ಬಲ್ಲೆ. ಆದರೆ ಸಪ್ತರ್ಷಿಶಿಬಿಕಾರೋಹಣವು ಹಾಗಾಗುವುದೋ ಇಲ್ಲವೋ ! ನಾನರಿಯೆ”

“ಕಾರಣ ?”

“ದೇವ ನಾನು ನನ್ನ ಪತಿಯಾದ ಇಂದ್ರನು ಎಳೆದ ಗೆರೆಯಿಂದಾಚೆಗೆ ಹೋಗುವುದಿಲ್ಲ. ಆತನು ಬೇಡವೆಂದರೆ ಏಕೆ ಎಂದು ಕೇಳದೆ ಅದನ್ನು ಬೇಡ ಎನ್ನುವವಳು ನಾನು. ಅದರಿಂದ ಈ ವಿಚಾರದಲ್ಲಿ ನಾನು ಏನೂ ಹೇಳಲೂ ದಕ್ಷಳಲ್ಲ.”

“ಹಾಗಾದರೆ ಇಂತಹ ವಿಷಯಗಳಲ್ಲಿ ತಮ್ಮ ವಿಚಾರವು ಕುಂಟು ಎಂದು ಕೊಳ್ಳೋಣವೆ ?”

ಶಚಿಯು ನಕ್ಕಳು “ತಾವು ಧರ್ಮಜ್ಞರು, ಧರ್ಮಿಷ್ಠರು ಎಂದು ಇಂದ್ರನೂ ಒಪ್ಪಿಕೊಂಡಿರುವನು. ಅದರಿಂದ ಎರಡು ಮಾತು ಹೆಚ್ಚಾದರೂ ತಾವು ಕ್ಷಮಿಸಬೇಕು.