ಪುಟ:Mahakhshatriya.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೇವರಾಜನು ಸ್ತುತಿಗರ್ಭವಾದ ಆ ವಾಕ್ಯಗಳನ್ನು ಕೇಳಿ ಹರ್ಷಿತನಾಗಿ ನುಡಿದನು : “ದೇವಗುರುಗಳು ದಯಮಾಡಿ ನಮಗೆ ಸಪ್ತರ್ಷಿಗಳ ದರ್ಶನವನ್ನು ಮಾಡಿಸಬೇಕು. ಮತ್ತು ನಾವು ಅವರೊಡನೆ ಸ್ವಂತಕ್ಕಾಗಿ ಕೆಲವು ಮಾತುಗಳನ್ನು ಆಡಲು ಅಪ್ಪಣೆ ಕೊಡಬೇಕು.”

ಬೃಹಸ್ಪತಿಯು ‘ಆಗಬಹುದು’ ಎಂದು ಆಸನಸ್ಥನಾಗಿ ಧ್ಯಾನದಲ್ಲಿ ಕುಳಿತನು. ಸಪ್ತರ್ಷಿಗಳಿಗಾಗಿ ಆಸನಗಳೂ ಮಧುಪರ್ಕಾದಿ ಪೂಜಾಸಾಧನಗಳೂ ಸಿದ್ಧವಾದುವು. ಉತ್ತರ ಕ್ಷಣದಲ್ಲಿಯೇ ದೇವಗುರುವು ಜಗ್ಗನೆದ್ದು “ಇದೋ ಸಪ್ತರ್ಷಿಗಳು ದಯಮಾಡಿಸುತ್ತಿರುವರು” ಎಂದನು. ಅರಸನೂ ಎದ್ದನು. ಪಾದುಕೆಗಳ ಶಬ್ದವು ಕೇಳಿಸಿತು. ಸಪತ್ನಿಕರಾದ ಸಪ್ತರ್ಷಿಗಳೂ ದೃಗ್ಗೋಚರರಾದರು. ದೇವಾಚಾರ್ಯನು ಅವರಿಗೆಲ್ಲ ಇಂದ್ರನ ಪರವಾಗಿ ಮಧುಪರ್ಕಾದಿ ಪೂಜೆಯನ್ನೊಪ್ಪಿಸಿದನು. ಅವರೆಲ್ಲ ಪ್ರಸನ್ನರಾಗಿ, “ದೇವರಾಜನಿಗೆ ನಮ್ಮಿಂದ ಆಗಬೇಕಾದ ಕೆಲಸವೇನಿದೆ? ಲೋಕಲೋಕಗಳೂ ಕ್ಷೇಮವಾಗಿವೆಯಷ್ಟೇ?” ಎಂದು ಕುಶಲಪ್ರಶ್ನಪೂರ್ವಕವಾಗಿ ವಿಚಾರಿಸಿದರು.

ದೇವರಾಜನು ನಯವಿನಯ ಭಕ್ತಿಗಳಿಂದ ಆ ಪ್ರಶ್ನಕ್ಕೆ ಉತ್ತರವನ್ನು ಸಲ್ಲಿಸಿ, “ಮನಸ್ಸಿನಲ್ಲಿ ವಿಚಿತ್ರವಾದ ಕೋರಿಕೆಯೊಂದು ಮೊಳೆತಿದೆ. ಅದನ್ನು ಸನ್ನಿಧಾನದಲ್ಲಿ ವಿಜ್ಞಾಪಿಸಬೇಕೆಂದು ತೋರಿತು. ತಮ್ಮ ಅಪ್ಪಣೆಯಾದಂತೆ ನಡೆಯುವೆನು” ಎಂದನು.

ಭರದ್ವಾಜರು ವಸಿಷ್ಠರ ಅಪ್ಪಣೆಯಂತೆ ನುಡಿದರು : ``ದೇವರಾಜನು ಮನುಷ್ಯೇಂದ್ರನಾಗಿದ್ದಾಗ ಸಂಪಾದಿಸಿದ ಚ್ಯವನಾನುಗ್ರಹವು ಧರ್ಮವನ್ನು ಮಾಡಿಸಿ ಅನನ್ಯಭವ್ಯವಾದ ಇಂದ್ರಪದವಿಯನ್ನು ಕೊಟ್ಟಿತು. ಹಾಗೆ ವಿಶಿಷ್ಟವಾದ ರೀತಿಯಲ್ಲಿ ಧರ್ಮವನ್ನು ಆಚರಿಸಿದ ಮಹಾನುಭಾವ ದರ್ಶನಸಲ್ಲಾಪಗಳಿಂದ ಸಪ್ತರ್ಷಿಗಳೂ ಆನಂದಿಸುವರು. ದೇವರಾಜ, ನಿನ್ನ ಮನಸ್ಸಿನಲ್ಲಿರುವ ಕೋರಿಕೆಯನ್ನು ಹೇಳು. ನಮಗೆ ಅದು ಗೊತ್ತಿದೆ. ನಮ್ಮಲ್ಲಿ ಒಬ್ಬರೊಬ್ಬರೂ ಮುಂದಾಗುವುದನ್ನು ತಿಳಿಯಬಲ್ಲೆವು. ಆದರೂ ನಿನ್ನ ಬಾಯಿಂದ ಕೇಳಿ ಸುಖಿಸಬೇಕೆಂದಿರುವೆವು, ಹೇಳು.”

ದೇವರಾಜನು ಸಪ್ತರ್ಷಿಗಳು ತನ್ನ ಮಾತನ್ನು ಗೌರವಿಸುವರೆಂಬ ನಂಬಿಕೆಯಿಂದ ದೃಢವಾದರೂ ಸಣ್ಣಗಿರುವ ಗೌರವದ ದನಿಯಿಂದ ಹೇಳಿದನು: “ಋಷಿಸಾರ್ವಭೌಮರಿಗೆ ಸಾಷ್ಟಾಂಗ ಪ್ರಣಾಮಗಳು. ತಮ್ಮೆಲ್ಲರ ಅನುಗ್ರಹದಿಂದ ಮುಖ್ಯವಾಗಿ ಗುರುಕೃಪೆಯಿಂದ ಲಭಿಸಿದ ಧರ್ಮಾಚರದ ಫಲವಾಗಿ ಎಂದು