ಪುಟ:Mahakhshatriya.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಾವು ಅಪ್ಪಣೆ ಕೊಟ್ಟಂತೆ ಇಂದ್ರಪದವಿಯು ಲಭಿಸಿತು. ಈಗ ನಡೆದಿರುವ ನಡವಳಿಕೆಗಳಿಂದ ಎಂದಿದ್ದರೂ ಈ ಪದವಿಯು ನನಗೆ ತಪ್ಪಿಯೇ ತಪ್ಪಬೇಕು. ಆದರೆ ಧರ್ಮಾಯತ್ತವಾಗಿ ಬಂದುದು ದೈವಾಯತ್ತವಾಗಿ ತಪ್ಪಿತು ಎನ್ನುವುದಕ್ಕಿಂತ ನಾನೇ ಸ್ವಾಯತ್ತವಾಗಿ ಇದನ್ನು ತ್ಯಜಿಸಿ ಧರ್ಮವೃದ್ಧಿಯಾಗುವಂತೆ, ಮಾಡಿಕೊಳ್ಳಬೇಕು ಎಂದಿರುವೆನು. ಅದಕ್ಕೆ ತಮ್ಮ ಅನುಗ್ರಹವಾಗಬೇಕು.”

“ಧರ್ಮವೃದ್ಧಿಯೇ ಗುರಿಯಾದರೆ, ನೀನು ಏನು ಮಾಡಬೇಕೆಂದರೂ ನಮ್ಮ ಬೆಂಬಲವುಂಟು ಹೇಳು.”

“ಈ ಪದವಿಯನ್ನು ತ್ಯಜಿಸುವುದಕ್ಕಿಂತ ಮುಂಚೆ ಅತೀಂದ್ರವಾದ ಕಾರ್ಯವನ್ನು ಮಾಡಬೇಕೆಂದಿರುವೆನು.”

“ಸರಿ. ಹೇಳು.”

“ಸಪ್ತರ್ಷಿಶಿಬಿಕೆಯು ಇಂದ್ರನಿಗೆ ಸಲ್ಲುವ ಅತ್ಯಂತ ಗೌರವಗಳಲ್ಲಿ ಒಂದು ಎಂದು ಕೇಳಿದೆನು. ಅದನ್ನು ಆತನು ತೇಜೋಹಾನಿಯಾದೀತೆಂದು ಹೆದರಿ ಆರೋಹಿಸುವುದಿಲ್ಲವಂತೆ, ಯಾವ ಕಾರ್ಯವನ್ನು ಮಾಡಿದರೂ ಅದರಿಂದ ತೇಜೋಹಾನಿಯಾಗದೆ ವೃದ್ಧಿಯೇ ಆಗುವಂತೆ ಮಾಡಿಕೊಳ್ಳುವ ಸಾಧನವೊಂದುಂಟು ಎಂದು ಕೇಳಿರುವೆನು. ಅದನ್ನು ತಾವು ದಯವಿಟ್ಟು ಅನುಗ್ರಹಿಸಬೇಕು.”

ಭರದ್ವಾಜನು ಎಲ್ಲರ ಮುಖಗಳನ್ನು ಮತ್ತೆ ನೋಡಿ ಅವರ ಸಮ್ಮತಿಯನ್ನು ಪಡೆದು ಹೇಳಿದರು : “ದೇವರಾಜ, ಹೌದು. ಅಂತಹದೊಂದು ಕ್ರಿಯೆಯುಂಟು. ಅದನ್ನೇ ಯಜ್ಞವೆನ್ನುವರು. ನೀನು ಸಪ್ತರ್ಷಿಶಿಬಿಕಾರೋಹಣಯಜ್ಞ ಮಾಡಬೇಕೆಂದಿರುವೆ. ಅದಕ್ಕಾಗಿ ಮಾಡಬೇಕಾದ ಯಜ್ಞವೆಂದರೆ ವಿಶ್ವಜಿದ್ಯಜ್ಞ. ನೀನು ಅದನ್ನು ಮಾಡಬಲ್ಲೆಯಾ ?”

“ನಾನು ಮಾಡುವೆನು ಎನ್ನುವುದಕ್ಕಿಂತ ಅದನ್ನು ನನ್ನಿಂದ ತಾವು ಮಾಡಿಸಬೇಕೆಂದು ಪ್ರಾರ್ಥಿಸಿಕೊಳ್ಳುವೆನು.”

“ಚ್ಯವನಮಹರ್ಷಿಗಳ ಅನುಗ್ರಹವು ನಿನ್ನನ್ನು ಕಾದಿದೆ. ಅಲ್ಲದೆ, ನೀನು ಇಂದ್ರನಾಗುವಾಗ ಪಿತೃಗಳು ಕೊಟ್ಟ ವರವೂ, ನೀನು ಕೇಳಿದ ರಹಸ್ಯವೆಂಥದೇ ಆದರೂ ಅದನ್ನು ತಿಳಿಸಬೇಕೆಂದು ಪಡೆದುಕೊಂಡ ವರವೂ ನಿನ್ನ ಬೆಂಗಾವಲಿಗಿವೆ. ಅದರಿಂದ ನಿನಗೆ ಆ ವಿಶ್ವಜಿದ್ಯಜ್ಞವನ್ನು ಅದನ್ನು ಮಾಡುವ ಕ್ರಮವನ್ನೂ ಹೇಳಲೇಬೇಕು. ಕೇಳು ; ನಿನ್ನ ಸರ್ವಸ್ವವನ್ನೂ ನಿನ್ನಲ್ಲಿರುವ ಕರ್ತೃಭೋಕ್ತೃಶಕ್ತಿಯನ್ನೂ ಸರ್ವವ್ಯಾಪಕನಾದ ಮಹಾವಿಷ್ಣುವಿಗೆ ಒಪ್ಪಿಸುವುದೇ