ಪುಟ:Mahakhshatriya.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಸ್ವಜಿದ್ಯಜ್ಞ. ಇದನ್ನು ಮಾಡಲು ನೀನು ಸಿದ್ಧವಾಗಿರುವೆಯಾ ?”

“ತಮ್ಮಿಂದ ಅಪ್ಪಣೆಯಾದುದನ್ನು ಮಾಡಲು ಸಿದ್ಧನಾಗಿದ್ದೇನೆ.”

“ದೇವರಾಜ, ಮಾತು ಕೊಡುವುದಕ್ಕಿಂತ ಮುಂಚೆ ಚೆನ್ನಾಗಿ ಪರ್ಯಾಲೋಚಿಸು. ಸಪ್ತರ್ಷಿಶಿಬಿಕಾರೋಹಣ ಮಾಡುವವನು ಅಹಂಕಾರವನ್ನೂ ಆ ಅಹಂಕಾರ ಕಾರಣವಾದ ಅಭಿಮಾನವನ್ನೂ ತ್ಯಜಿಸಬೇಕು.”

“ಧರ್ಮವಾಗಿ ಏನೇನು ತ್ಯಜಿಸಬಹುದೋ ಅದೆಲ್ಲವನ್ನೂ ತ್ಯಜಿಸುವೆನು.”

“ಭಲೆ, ದೇವರಾಜ, ನೀನು ಬಹು ಜಾಗರೂಕನಾಗಿರುವೆ. ನಿಜ, ನೀನು ಗೃಹಸ್ಥನು. ಪತ್ನಿಯೊಬ್ಬಳನ್ನಲ್ಲದೆ ಮಿಕ್ಕೆಲ್ಲವನ್ನೂ ತ್ಯಜಿಸುವೆನೆಂದೆ. ಸರಿ ! ನೀನೂ ಹೇಳಿದಂತೆಯೇ ಆಗಲಿ. ನೀನು ವಿಶ್ವಜಿದ್ಯಜ್ಞ ಮಾಡಲು ಶತ್ರುಮಿತ್ರಭೇದವನ್ನು ಬಿಡಬೇಕು.”

“ಶತ್ರುಗಳನ್ನು ಗೆದ್ದು ಪದಾಕ್ರಾಂತರನ್ನಾಗಿ ಮಾಡಿ ಅವರನ್ನು ಔದಾರ್ಯದಿಂದ ಮಿತ್ರರನ್ನಾಗಿ ಮಾಡಿಕೊಂಡಿರುವೆನು. ಅದರಿಂದ ಲೋಕವೇ ನನಗೆ ಮಿತ್ರವಾಗಿರುವಾಗ ಶತ್ರುಮಿತ್ರದ ಭೇದವನ್ನು ಬಿಡುವುದು ನನಗೆ ಕಷ್ಟವಿಲ್ಲ.”

“ಆಯಿತು. ಇತರರನ್ನು ಗೆದ್ದು ಪದಾಕ್ರಾಂತರನ್ನಾಗಿ ಮಾಡಿಕೊಂಡೆ. ನಿನ್ನಲ್ಲಿಯೇ ಸೇರಿಕೊಂಡು ನಿನ್ನನ್ನು ಪದಾಕ್ರಾಂತನನ್ನಾಗಿ ಮಾಡಿಕೊಂಡ ರಾಗದ್ವೇಷಗಳನ್ನೂ ಅವುಗಳ ಫಲವಾದ ಸುಖದುಃಖಗಳನ್ನೂ ಬಿಡುವೆಯಾ?”

“ಬಿಟ್ಟೆನೆಂದು ಹೇಳಿದರೆ ಸುಳ್ಳು. ಅವುಗಳನ್ನು ನಿಯಮಿತ ಮಾಡುವೆನು.”

“ನೀನು ಸತ್ಯವಾದಿ. ದೇವರಾಜ, ಅವುಗಳನ್ನು ಬಿಡಲಾಗುವುದಿಲ್ಲವೆಂದೇ ಬಲ್ಲವರು ಅವುಗಳ ವಿಚಾರದಲ್ಲಿ ಉದಾಸೀನರಾಗಿ ಧರ್ಮವನ್ನು ಮಾತ್ರ ಆಚರಿಸುವರು. ಅವುಗಳನ್ನು ಬಿಡುವುದೆಂದರೆ ಧರ್ಮಪರಾಯಣನಾಗುವುದು. ನೀನು ಆಗಿರುವೆಯೆಂದೇ ನಾವು ಇದನ್ನು ಕುರಿತು ಪ್ರಸ್ತಾಪಿಸಿದುದು. ಇದಿಷ್ಟೂ ಶಿಬಿಕಾರೋಹಣದ ಪೂರ್ವಸಿದ್ಧತೆ, ಅಹಂಕಾರವನ್ನು ಅರ್ಥಾತ್ ರಾಗದ್ವೇಷಗಳನ್ನು ಬಿಡಲಾರದೆ ಇಂದ್ರನು ಈ ಶಿಬಿಕಾರೋಹಣವೇ ಬೇಡವೆಂದನು. ನೀನು ಪೂರ್ವ ಸಿದ್ಧತೆಯನ್ನು ಪಡೆದಿರುವೆಯಾಗಿ ನೀನು ಶೀಬಿಕಾರೋಹಣವನ್ನು ಮಾಡಬಹುದು.

“ತಾವು ಅಪ್ಪಣೆಯನ್ನು ಕೊಟ್ಟುದಕ್ಕಾಗಿ ನಾನು ಕೃತಜ್ಞನಾಗಿರುವೆನು. ಆದರೆ, ತಾವಿನ್ನೂ ಒಂದು ವಿಷಯವಾಗಿ ಅಪ್ಪಣೆ ಕೊಡಿಸಿಲ್ಲ. ಆರೋಹಿಸಿದ ಮೇಲೆ ಶಿಬಿಕೆಯಲ್ಲಿರುವಾಗ ಹೇಗೆ ಇರಬೇಕು ಎಂಬುದನ್ನು ಕುರಿತು ಹೇಳಿಲ್ಲ.”

“ಆಗಲಿ, ಕೇಳು ; ಮಹಾವಿಷ್ಣುವು ಅಣುರೇಣುತೃಣಕಾಷ್ಠಗಳನ್ನು ವ್ಯಾಪಿಸಿರುವನು. ಅಂತರ್ಬಹಿಗಳನ್ನೆಲ್ಲಾ ತುಂಬಿರುವನು. ಆತನನ್ನು ಧ್ಯಾನಮಾಡುತ್ತ