೩೪.ಸಂಪ್ರದಾಯಗಳು
ಅಮರಾವತಿಯಲ್ಲಿ ಶಿಬಿಕೋತ್ಸವಕ್ಕಾಗಿ ಅದ್ಭುತವೂ ಅಪೂರ್ವವೂ ಆದ ಸಿದ್ಧತೆಗಳು ನಡೆಯುತ್ತಿವೆ. ದಾನವಗುರು ಶುಕ್ರಾಚಾರ್ಯರನ್ನು ಬರಮಾಡಿಕೊಂಡು ಇಂದ್ರನು ಆತನು ಹೇಳಿದವರಿಗೆಲ್ಲ ಆಹ್ವಾನಪತ್ರಿಕೆಗಳನ್ನು ಕಳುಹಿಸುತ್ತಿದ್ದಾನೆ. ಆತನೂ ಈ ಹೊಸ ಇಂದ್ರನ ಸೌಜನ್ಯವನ್ನು ಕಂಡು ಮಾರುಹೋಗಿದ್ದಾನೆ. ದೇವಗುರುವು ದೇವಹಿತವನ್ನು ಕೋರುವನಾದರೂ ಇಷ್ಟು ಸಜ್ಜನನೆಂದು ಆತನು ತಿಳಿದಿರಲಿಲ್ಲ. ಅವರ ಮೇಲೆ ವೈರವನ್ನು ಸಾಧಿಸುತ್ತಿದ್ದುದು ತಪೋ ಎಂದುಕೊಳ್ಳುತ್ತಾನೆ. ಆದರೂ, ‘ಇಲ್ಲಿ ಲೋಕಸ್ಥಿತಿಗೆ ನಾವಿಬ್ಬರೂ ದ್ವೇಷಿಗಳಾಗಿ ಒಬ್ಬೊಬ್ಬರು ಒಂದೊಂದು ಕಡೆಗೆ ಎಳೆಯುತ್ತಿರಬೇಕು ಎಂದು ತೋರುತ್ತದೆ. ಆದರೆ ದ್ವೇಷವೊಂದು ಮನೋವಿಕಾರ. ಆ ವಿಕಾರವಿಲ್ಲದೆ ಏಕೆ ದೇವದಾನವರು ಹೋರಾಡಬಾರದು’ ಎಂದೆನ್ನಿಸುತ್ತದೆ. ಮರುಕ್ಷಣದಲ್ಲಿಯೇ ‘ಸ್ವಭಾವ, ಸ್ವಭಾವ ! ಏನು ಮಾಡಿದರೂ ಸ್ವಭಾವವನ್ನು ಒಂದು ಗಳಿಗೆ ಬದಲಾಯಿಸಬಹುದಲ್ಲದೆ, ತಿದ್ದುವುದಕ್ಕಾದೀತೆ ? ಹೋಗಲಿ ಬಿಡು’ ಎನ್ನುತ್ತಾನೆ.
ಭೂಲೋಕದಿಂದ ಯಯಾತಿಯೂ ಆತನ ಮಕ್ಕಳು, ಮಡದಿಯರೂ, ಪರಿವಾರದಲ್ಲಿ ಮುಖ್ಯರಾದವರೂ ಬಂದಿದ್ದಾರೆ. ಅಮರಾವತಿಯು ಅತಿಥಿಗಳಿಂದ ಕಿಕ್ಕಿರಿಯುತ್ತಿದೆ. ಲೋಕಲೋಕಗಳಿಂದ ಬರುವವರೂ ಬರಬೇಕಾದವರೂ ತುಂಬುತ್ತಿದ್ದಾರೆ.
ಒಂದು ಪ್ರಾತಃಕಾಲ ದೇವಗುರುವು ಮಂದಿರದಲ್ಲಿ ಕುಳಿತಿರುವಾಗ ಯೋಚನೆಯು ಬಂತು. ಅವಸರ ಅವಸರವಾಗಿ ದೇವರಾಜನನ್ನು ನೋಡಲು ಹೋದನು. ಆತನೂ ದೇವಗುರುವನ್ನು ನೋಡಬೇಕು ಎಂದುಕೊಳ್ಳುತ್ತಿದ್ದನು. ದೇವಗುರುಗಳಿಗೆ ನಮಸ್ಕಾರಾದಿಗಳನ್ನು ಒಪ್ಪಿಸಿ ಕೈಮುಗಿದುಕೊಂಡು ನಿಂತು, “ಅನುಗ್ರಹ ಮಾಡಿ ಬಂದಿರಿ” ಎಂದನು. ದೇವಗುರುವು ನಗುತ್ತ “ದೇವರಾಜನಿಗೆ ತಿಳಿಯದ್ದು ಇಲ್ಲ. ಆದರೂ ನೆನಪು ಮಾಡಿಕೊಡುತ್ತೇನೆ. ತಪ್ಪಿಲ್ಲವಲ್ಲ ? ಸಪ್ತರ್ಷಿಗಳು ನಿರ್ವಿಕಲ್ಪ ಸಮಾಧಿಯಲ್ಲಿ ಶಿಬಿಕೆಯಲ್ಲಿ ಕುಳಿತಿರಬೇಕು ಎಂದು ಹೇಳಿದರು. ಅದನ್ನು ಪಡೆಯುವ ದಾರಿಯಲ್ಲಿ ಹೇಳಲಿಲ್ಲ ; ಅಲ್ಲವೆ ?”