ಪುಟ:Mahakhshatriya.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಾಗಿಲಲ್ಲಿ ಸಂದು ಆತನನ್ನು ಮಹೇಂದ್ರವೈಭವದಿಂದ ಶಚೀದೇವಿಯರ ಅರಮನೆಗೆ ಕರೆದೊಯ್ಯಬೇಕು. ಇದು ನಮ್ಮಾಜ್ಞೆ” ಎಂದನು. ಪ್ರಹರಿಯು ಕೈಮುಗಿದು ಹೋದನು.

ಇಂದ್ರನು ಮತ್ತೆ ಆಚಾರ್ಯರಿಬ್ಬರ ಕಡೆಗೆ ತಿರುಗಿ, ಕಠಿಣವಾದ ಉಕ್ಕು ಪುಷ್ಪದಂತೆ ಮೃದುವಾದ ಹಾಗೆ, “ಆಚಾರ್ಯರ ಸನ್ನಿಧಾನದಲಿಯೂ ಗಡುಸಾಗಬೇಕಾಗಿ ಬಂತು. ಮನ್ನಿಸಬೇಕು, ನಮ್ಮ ಅಪ್ಪಣೆಗಳೆಲ್ಲವೂ ನೆರವೇರುವಂತೆ ಅನುಗ್ರಹ ಮಾಡಬೇಕು” ಎಂದು ನಮಸ್ಕರಿಸಿದನು.

ಆಚಾರ್ಯರಿಬ್ಬರೂ ಮನಃಪೂರ್ವಕವಾಗಿ ಆಶೀರ್ವದಿಸಿದರು. ಬಾಯಿ ತುಂಬಾ ‘ತಥಾಸ್ತು’ ಎಂದು ಹರಸಿದರು. ಎದ್ದುನಿಂತು ವೇದೋಕ್ತ ಆಶೀರ್ವಾದಗಳನ್ನು ಮಾಡುತ್ತ, ಇಬ್ಬರೂ ‘ನಹುಷ, ನೀನು ಇಂದ್ರನಲ್ಲ ಅತೀಂದ್ರ, ಪ್ರಭುತ್ವವು ಒಂದು ತೂಕವಾದರೆ, ಅದನ್ನು ವಿನಿಯೋಗಿಸುವುದಕ್ಕೆ ಬೇಕಾದ ಬುದ್ಧಿಸಾಮಥರ್ಯ್‌ಗಳೆರಡೂ ಎರಡೆರಡು ತೂಕ. ಪ್ರಭುತ್ವ ಬುದ್ಧಿ ಸಾಮಥರ್ಯ್‌ಗಳೆಲ್ಲವನ್ನೂ ಪಡೆದಿರುವವನು ನೀನು. ಇಂದ್ರನಾಗುವುದಕ್ಕೆ ಮಾತ್ರವಲ್ಲಾ ಅತೀಂದ್ರನಾಗಿ ಇಂದ್ರಗಣವನ್ನೂ ಆಳಲು ಬಲ್ಲವನು ನೀನು” ಎಂದು ಸಂತೋಷವಾಗಿ ಮುಕ್ತಕಂಠರಾಗಿ ಹೊಗಳಿದರು.

ದೇವರಾಜನು ಮತ್ತೆ ಕೇಳಿದನು. ಅದು ಶುಕ್ರರನ್ನು ಸಂಬೋಧಿಸಿ ಹೇಳಿದುದಾಗಿತ್ತು. “ದೇವ, ತಮ್ಮ ಶಿಷ್ಯರಲ್ಲಿ ಯಾರೂ ಬ್ರಹ್ಮವಿದ್ಯಾ ಸಂಪ್ರದಾಯಕರಿಲ್ಲವೆ ?”

ಶುಕ್ರನು ತಲೆದೂಗಿದನು : “ದೈತ್ಯದಾನವಾದಿಗಳಲ್ಲಿ ಬ್ರಹ್ಮಾನುಸಂಧಾನ ಮಾಡುವವರಿಲ್ಲ ಎಂದರೆ ತಪ್ಪಿಲ್ಲ. ಆದರೆ, ಪರಮವೈಷ್ಣವನಾದ ಪ್ರಹ್ಲಾದನ ಮಾತು ಬೇರೆ. ದೈತ್ಯದಾನವಾದಿಗಳೆಲ್ಲ ವೈರೋಚನಮತದವರು, ದೇಹ ಬ್ರಹ್ಮವಾದಿಗಳು.”

“ಸರಿ, ಹಾಗಾದರೆ, ಅಪ್ಪಣೆಯಾದರೆ, ದೇವಗುರುಗಳು ಯಮಧರ್ಮ ರಾಜನನ್ನು ಬರಮಾಡುವರು.”

“ಆಗಬಹುದು.”

ದೇವಾಚಾರ್ಯರು ಯಮಧರ್ಮನನ್ನು ಧ್ಯಾನಿಸಿದರು. ಯಮಧರ್ಮನು ಅಲ್ಲಿಯೇ ಪ್ರತ್ಯಕ್ಷನಾಗಿ ಆಚಾರ್ಯರನ್ನು ನಮಸ್ಕರಿಸಿದನು. ಆತನು ಇಂದ್ರನನ್ನು ತೋರಿಸಿ, “ಶಿಬಿಕಾರೋಹಣ ಕಾಲದಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿರಬೇಕು. ಅದಕ್ಕೆ ಉಪಷ್ಪಂಭಕವಾಗಿ ಬ್ರಹ್ಮವಿಚಾರವನ್ನು ಮಾಡಬೇಕೆಂದು ನಾನು ಕೋರಿದೆನು.