ಪುಟ:Mahakhshatriya.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅದು ಸುಪ್ತವಾಗಿತ್ತು. ಈಗ ಜಾಗ್ರತವಾಗುವುದು” ಎಂದು ಮೊದಲು ಶಾಸ್ತ್ರವನ್ನು ಬೋಧಿಸಿದನು. “ಈ ಜಗತ್ತಿನಲ್ಲಿ ಪ್ರಾಣಿ ಪ್ರಾಣಿಯೂ - ಸ್ಥಾವರವಾಗಲಿ, ಜಂಗಮವಾಗಲಿ-ಹುಡುಕುವುದು ಅನ್ನವನ್ನು ಪೂರ್ಣ ಅಪೂರ್ಣಗಳ ಸಂಮಿಶ್ರತೆಯೇ ಈ ಜಗತ್ತು. ಅಪೂರ್ಣವನ್ನು ತಿರಸ್ಕರಿಸಿ ಪೂರ್ಣವನ್ನು ಹಿಡಿಯುವುದೇ ಬ್ರಹ್ಮವಿದ್ಯೆ. ಅನ್ನದಲ್ಲಿ ಪ್ರೇರಿಸುವ ಮನಸ್ಸು ಇವುಗಳನ್ನೂ ಪೂರ್ಣದಲ್ಲಿಲ್ಲ ಎಂದು ತಿಳಿದಾಗ ಮನಸ್ಸು ಇಲ್ಲವಾಗುವುದು. ಆ ಮನಸ್ಸಿನ ಆಚೆ ನಿಂತು ತಾನು ಪ್ರತ್ಯೇಕವೆನ್ನುತ್ತಿರುವ ಅಹಂಕಾರದ ಅಪೂರ್ಣತೆಯನ್ನು ಕಂಡರೆ ಅದು ಮುಂದಕ್ಕೆ ಕಳುಹಿಸುವುದು. ಆಗ ತಾನು ಎನ್ನುತ್ತಿರುವ ಚೇತನವು ಸಚ್ಚಿದಾನಂದವೆಂದು ತಿಳಿಯುವುದೇ ಕೊನೆಯ ಅವಸ್ಥೆಯು. ಅಲ್ಲಿಂದ ಆಚೆಗೆ ಹೋಗುವುದೇ ನಿರ್ವಿಕಲ್ಪವು. ಅದನ್ನೇ ಆರೂಢವೆನ್ನುವರು. ಒಂದು ಗಳಿಗೆ ನನಗೆ ವಶನಾಗು. ಇದರ ಅನುಭವವನ್ನು ನೋಡಿಕೋ” ಎಂದು ವರುಣನು ನಹುಷನ ತಲೆಯ ಮೇಲೆ ಕೈಯಿಟ್ಟನು.

ನಹುಷನು ಕಣ್ಮುಚ್ಚಿ ಕುಳಿತನು. ಅನ್ನವಾಗಿ ಲೋಕದಲ್ಲೆಲ್ಲಾ ಇರುವುದು ಪ್ರಾಣ. ಬದುಕಿರುವಾಗ ಅನ್ನಾದನಾಗಿ, ಸತ್ತು ಇನ್ನೊಂದಕ್ಕೆ ಅನ್ನವಾಗುತ್ತಿರುವ ಪ್ರಾಣವೇ ಲೋಕವನ್ನೆಲ್ಲಾ ತುಂಬಿದೆ. ಅದೇ ಮತ್ತೆ ಮನಸ್ಸಾಗಿ ತನ್ನನ್ನು ತಾನೇ ಪ್ರೇರಿಸಿಕೊಳ್ಳುತ್ತಿದೆ. ಇವಿಷ್ಟೂ ಪೂರ್ಣವಾದಾಗ ಬ್ರಹ್ಮಬಿಂಬವನ್ನು ಧಾರಣ ಮಾಡುವ ಬುದ್ಧಿಯಾಗಿದೆ. ಆ ಪ್ರತಿಬಿಂಬವು ತನ್ನನ್ನು ಮಿತವೆಂದುಕೊಂಡು, ಪ್ರತ್ಯೇಕವೆಂದುಕೊಳ್ಳುತ್ತಿದೆ. ಅದು ಹಿಂತಿರುಗಿ ನೋಡಿದರೆ ತನ್ನ ಅಸ್ತಿತ್ವಕ್ಕೆ ಕಾರಣವಾದ ಆನಂದವನ್ನು ತಾನೆಂದುಕೊಳ್ಳುತ್ತದೆ. ಆ ಆನಂದವು ಬಹಿರ್ಮುಖವಾಗಿದ್ದುದು ಅಂತರ್ಮುಖವಾಗುತ್ತದೆ. ಆಗ ಕಾಲದೇಶಗಳನ್ನು ಮೀರಿ ತನ್ನ ಹೊರತು ಇನ್ನೇನೂ ಇಲ್ಲವೆಂದುಕೊಳ್ಳುತ್ತದೆ. ಅದು ಶಾಂತಿ. ಆ ಶಾಂತಿಯನ್ನು ನಹುಷನು ಅನುಭವಿಸುತ್ತಾನೆ.

ವರುಣನು ಕೈ ತೆಗೆದನು. ದೀಪವು ಆರಿದರೂ ಸೊಡರಿದ್ದ ಕಂಬವು ಬಿಸಿಯಾಗಿರುವಂತೆ, ಆ ಅವಸ್ಥೆಯು ನಹುಷನಿಗೆ ಅಷ್ಟು ಹೊತ್ತು ಇದ್ದು ಎಚ್ಚರವಾಯಿತು. ವರುಣನು ಹೇಳಿದನು : “ಇಂದ್ರ, ಸಂಶಯ ವಿಪರೀತ ಭಾವನೆಗಳೇನಾದರೂ ಇದ್ದರೆ ಅವನ್ನು ಅಭ್ಯಾಸಬಲದಿಂದ ಕಳೆದುಕೊ. ಶಾಸ್ತ್ರದ ಕಡೆಗೆ ಅನುಭವವನ್ನು ತಿದ್ದಿಕೊ. ಅನುಭವದಲ್ಲಿರುವ ಅಪೂರ್ಣತೆಯಿಂದ ಸಂಶಯ ವಿಪರೀತಗಳು ತಲೆದೋರುವುವು. ಆ ಅಪೂರ್ಣತೆಯನ್ನು ಕಳೆದರೆ, ಶಾಸ್ತ್ರವೇ ಅನುಭವವಾಗುವುವು” ಎಂದು ಹೇಳಿ ಎಲ್ಲರನ್ನೂ ಬೀಳ್ಕೊಂಡು ಹೊರಟು ಹೋದನು.