ಪುಟ:Mahakhshatriya.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶೋಭಿಸದು. ಮಹಾವಿಷ್ಣುವಲ್ಲದೆ ಇನ್ನು ಯಾರೂ ಮಾಡುವುದಕ್ಕಾಗದ ಉಪಕಾರ ಮಾಡಿ, ದೇಶಾಂತರಗತನಾಗಿದ್ದ ಪತಿಯನ್ನೂ ಕರೆಯಿಸಿಕೊಟ್ಟ ನಿನಗಿಂತ ಉಪಕಾರಿ ಯಾರು? ಅದರಿಂದ ನಿನ್ನಲ್ಲಿ ಏಕವಚನವನ್ನು ಉಪಯೋಗಿಸಿದರೆ ಸಹಿಸಿಕೊ. ನಾನು ಇಂದ್ರನೂ ಮಾತನಾಡಿಕೊಂಡೆವು. ನೀನು ಮಾಡಿದಂತೆ ಮಾಡಿ ಹತ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿತ್ತು. ನಮಗೆ ಬುದ್ಧಿಯು ಓಡಲಿಲ್ಲ. ಅದರಿಂದ ನೀನು ಬುದ್ಧಿಯಲ್ಲಿ ಜ್ಯೇಷ್ಠನಾದೆ. ಅದರಿಂದ ಹೇಗೂ ನೀನೇ ಇಂದ್ರಪದವಿಗೆ ಯೋಗ್ಯನು. ನೀನು ಶಚೀಪತ್ನಿತ್ವವನ್ನು ಬಯಸಿದೆಯೆಂದು ನೀನು ಈ ದೇಹವನ್ನು ಅಪೇಕ್ಷಿಸುವೇ ಎಂದು ಹೆದರಿ ನಾನು ನಿನ್ನನ್ನು ಸಾರಿದೆ. ಆದರೆ ಧೀರೋದಾತ್ತನಾದ ನಿನಗೆ ಬೇಕಾದುದು ಹೆಣ್ಣಲ್ಲವೆಂದು ತಿಳಿದು, ಹೆಣ್ಣಾದ ನಾನು ಎಷ್ಟು ಸಂತೋಷಪಟ್ಟೆ ಬಲ್ಲೆಯಾ? ಅಲ್ಲದೆ ದೇವ, ನಿಜವಾಗಿ ಹೇಳುವೆನು, ಹೆಣ್ಣಿಗೆ ಸರ್ವ ಸೌಭಾಗ್ಯವೂ ಒಂದು ತೂಕ. ತಾನೊಲಿದ ಪತಿಯೇ ಒಂದು ತೂಕ. ಹಾಗೆ ಸರ್ವಸೌಭಾಗ್ಯಗಳಿಗಿಂತ ಹೆಚ್ಚಾದ ಪತಿಭಾಗ್ಯವನ್ನೂ ಮಾಂಗಲ್ಯಭಾಗ್ಯವನ್ನೂ ಕರುಣಿಸಿದ ನಿನಗೆ ನಾನು ಏನು ತಾನೆ ಒಪ್ಪಿಸಲಿ? ಅದರಿಂದ ನನ್ನಲ್ಲಿದ್ದ ಇಂದ್ರಾಣೀತ್ವವನ್ನು ನಿನ್ನ ಅಪ್ಪಣೆಯಾದರೆ ವಿರಜಾದೇವಿಗೆ ಒಪ್ಪಿಸುವೆನು. ದೇವತೆಗಳೂ ಋಷಿಗಳೂ ಪಿತೃಗಳೂ ಸೇರಿ ನಿನಗೆ ಅನುಗ್ರಹಿಸಿರುವ ಈ ತ್ರೈಲೋಕ್ಯಾಧಿಪತ್ಯವನ್ನು ಕೊನೆಯವರೆಗೂ ಅನುಭವಿಸು. ಮೂರು ಲೋಕದವರೂ ನಿನ್ನನ್ನು ನಿನ್ನಂತಹ ಸರ್ವತಃ ಸರ್ವಥಾ ಜ್ಯೇಷ್ಠನಾದವನನ್ನು ಧರ್ಮ ಪರಾಯಣನನ್ನು ಅರಸಾಗಿ ಪಡೆದು ಸುಖಿಸುವ ಭಾಗ್ಯವನ್ನು ಹೊಂದಲಿ.”

ಬುಟ್ಟಿಯಿಂದ ಎತ್ತಿಸುರಿದ ಹೂವಿನಂತೆ, ನಿರರ್ಗಳವಾಗಿ ಸಹಜಸುಂದರವಾಗಿ ಹೃದಯದಿಂದ ಬಂದುದಾಗಿರುವ ಶಚೀದೇವಿಯ ಭಾಷಣಗಳನ್ನು ಕೇಳಿ ನಹುಷ ದಂಪತಿಗಳು ಆನಂದಾನಂದವನ್ನು ಪಡೆದರು. ಅದನ್ನು ಪೂರ್ಣವಾಗಿ ಅನುಭವಿಸುವವನಂತೆ ನಹುಷನು ಒಂದು ಗಳಿಗೆ ಸುಮ್ಮನಿದ್ದು ವಿರಜಾದೇವಿಯ ಸಮ್ಮತಿಯನ್ನು ಸನ್ನೆಯಿಂದ ಪಡೆದು ಹೇಳಿದನು: “ಶಚೀದೇವಿ, ನೀನು ಪತಿಭಕ್ತೆಯೆಂದು ನಿನ್ನ ಮೇಲೆ ಅಪಾರವಾದ ಗೌರವವು ಬಂದಿದೆ. ಹಿಂದೆ ನೀನು ಬಂದಾಗ ನಿನ್ನನ್ನು ನಾನು ‘ತಾವು’ ಎಂದು ಸಂಬೋಧಿಸಿದುದು ನಿನಗೆ ನೆನಪಿರಬಹುದು. ಈಗ ನೀನಾಗಿ ದೊಡ್ಡಮನಸ್ಸುಮಾಡಿ, ನಾನು ಅಧಿಕಾರಸ್ಥಾನದಲ್ಲಿ ಮಾಡಬೇಕಾಗಿದ್ದು ಮಾಡಿದ ಕೆಲಸವನ್ನು ಪರಮೋಪಕಾರವೆಂದು ಭಾವಿಸಿ ನನ್ನನ್ನು ನಿನ್ನ ಆಪ್ತೇಷ್ಟರಲ್ಲಿ ಪರಿಗಣಿಸಿ ಗೌರವಿಸಿರುವೆ. ಒಂದು ಗಳಿಗೆ ಮುಂಚೆ ಇಂದ್ರನಿಗೆ ನಾನು ಬಿನ್ನವಿಸಿದುದನ್ನು