ವಿಷಯಕ್ಕೆ ಹೋಗು

ಪುಟ:Mahakhshatriya.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಿತ್ತೆಸೆದಂತೆ ಆಗಿದೆ. ಲೋಕಲೋಕವು ಮಂಗಳಮಯವಾಗಿದೆ. ಮರಗಿಡಬಳ್ಳಿಗಳೂ ಹೊಸಮಳೆಯಲ್ಲಿ ನೆಂದಂತೆ ಮಂಗಳವಾದ ಮನೋಹರವಾದ ರೂಪವನ್ನು ಧರಿಸಿವೆ. ಹಕ್ಕಿಗಳು ಸಂತೋಷದಿಂದ ಹಾಡಿ ನರ್ತಿಸುತ್ತಿವೆ. ಮಾರುತವು ಮಂದವಾಗಿ ಬೀಸುತ್ತ ಆನಂದವನ್ನು ಹೊತ್ತು ತಂದು ಬೀರುತ್ತಿರುವಂತೆ ಮಂಗಲವಾಗಿದೆ. ಅಷ್ಟೇನು? ಮಾಂಗಲ್ಯದೇವಿಯು ಲೋಕಗಳನ್ನು ತನ್ನ ಮಂದಿರ ಮಾಡಿಕೊಂಡಂತಿದೆ. ಮನೆಗಳಲ್ಲಿ ಹಚ್ಚಿಟ್ಟ ದೀಪಗಳ, ಹೊತ್ತಿಟ್ಟ ಬೆಂಕಿಗಳೂ ಪ್ರಕಾಶಮಾನವಾಗಿ ಪ್ರಸನ್ನವಾಗಿವೆ.

ಶಿಬಿಕೋತ್ಸವವು ಹೀಗೆ ಲೋಕಮಂಗಳಕಾರಕವಾಗಿ ಆರು ದಿನ ನಡೆಯಿತು. ಒಂದೇ ಸಮನಾಗಿ ಚೊಕ್ಕವಾದ ರಾಜಭೋಜನವನ್ನು ಮಿತಿಯಿಲ್ಲದೆ ಭುಜಿಸಿದ ಹೊಟ್ಟೆಬಾಕನು ತೃಪ್ತಿಯಾದಂತೆ, ಲೋಕದಲ್ಲಿ ಎಲ್ಲೆಲ್ಲೂ ಆಗಿದೆ. ಹಗಲು ತೀವ್ರವಾದ ಬಿಸಿಲು, ರಾತ್ರಿ ಮುಸಲಧಾರೆಯ ಮಳೆಯಾದರೆ, ಭೂಮಿಯಲ್ಲಿ ಎಲ್ಲೆಲ್ಲೂ ಸಣ್ಣಗೆ ನೀರು ಅಲ್ಲಲ್ಲಿ ನಿಂತು, ಇನ್ನಲ್ಲಲ್ಲಿ ಓಡುತ್ತಾ ಮನೋಹರವಾಗಿರುವಂತೆ ಭೂಮಿಯು ತಾನು ಎಷ್ಟು ನೀರು ಕುಡಿಯಬಹುದೋ ಅಷ್ಟೂ ಕುಡಿದು ಹೆಚ್ಚು ನೀರನ್ನು ಪ್ರವಾಹಗಳಿಗೆ ಕೊಟ್ಟು ಇನ್ನೂ ಇರುವ ನೀರನ್ನೂ ಸೂರ್ಯಕಿರಣಗಳಿಗೆ ಬಾಷ್ಪವಾಗಿ ಕೊಡುವಂತೆ, ಲೋಕಲೋಕಗಳೂ ಮಾಂಗಲ್ಯವನ್ನು ಆಕಂಠಪೂರ್ತಿಯಾಗಿ ಅನುಭವಿಸಿ ಈಚೆಗೆ ಕಕ್ಕುತ್ತಿರುವಂತೆ ಎಲ್ಲೆಲ್ಲಿಯೂ ಮಾಂಗಲ್ಯವು ತಾಂಡವವಾಡುತ್ತಿದೆ. ಸ್ತ್ರೀಯರ ಮುಖದಲ್ಲಿ ಪುರುಷರ ಹೃದಯದಲ್ಲಿ ಹಕ್ಕಿಗಳ ಕಂಠದಲ್ಲಿ ಹಸುಗಳ ಕೆಚ್ಚಲಲ್ಲಿ ಮರಗಿಡಗಳ ಪರ್ಣರಾಜಿಯಲ್ಲಿ ಎಲ್ಲೆಲ್ಲೂ ಮಾಂಗಲ್ಯ. ಸೃಷ್ಟಿಗೆ ಸೃಷ್ಟಿಯೇ ಮಂಗಲಗಾನವನ್ನು ಮುದ್ದಾಗಿ ಹಾಡಬೇಕೆಂದು ಸಂಕಲ್ಪಪೂರ್ವವಾಗಿ ಹಾಡುವಂತಿದೆ. ಪೂರ್ಣವು ಪೂರ್ಣವಾಗಿ ಭೋಗನಾಶಗಳಿಂದ ಪೂರ್ಣವಾಗಿಯೇ ಇರುವಂತೆ ಎಲ್ಲವನ್ನೂ ತುಂಬಿ ತಾನೇ ತಾನಾಗಿದೆ.

ಏಳನೆಯ ದಿನ ಬಂತು. ಅರಸನು ತನ್ನ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಲಕ್ಷ್ಮೀನಾರಾಯಣ ಪೂಜೆಯನ್ನು ಮಾಡಿಕೊಂಡು ಶಿಬಿಕಾಪೂಜೆಗಾಗಿ ಹೊರಡುತ್ತಿದ್ದ ಹಾಗೆಯೇ ಉಟ್ಟಿದ್ದ ಪಂಚೆಯು ತೊಡರಿ ಮುಗ್ಗರಿಸುವಂತಾಯಿತು. ರಾಜನು ಹಾಗೆಯೇ ನಿಂತು, ‘ಸರಿ. ಇದು ಏಳನೆಯ ದಿನ’ ಎಂದು ಮನಸ್ಸಿನಲ್ಲಿ ಎಂದುಕೊಂಡು ಮುಂದೆ ಹೊರಟನು. ಆತನಿಗೆ ಇದು ದುಶ್ಯಕುನ ಎನ್ನಿಸಲಿಲ್ಲ. ಮುಂದೆ ಆಗಬೇಕಾದುದನ್ನು ಸೂಚಿಸುವ ಶಕುನವಿದು ಎನ್ನಿಸಿತೇ ಹೊರತು, ಇದು ದುಷ್ಟವೆನಿಸಲಿಲ್ಲ. ಮನಸ್ಸು ತನ್ನ ಕಾಮಕ್ರೋಧಗಳನ್ನೂ ಬಿಟ್ಟು ಶುದ್ಧವಾಗಿ ಸರ್ವವನ್ನು ಶುಭವನ್ನಾಗಿಯೇ ಕಾಣುವ ಸಂಕಲ್ಪವನ್ನು ವಹಿಸಿಕೊಂಡಿರುವಾಗ