ಪುಟ:Mahakhshatriya.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬುದ್ಧಿಯು ತಾನು ಪ್ರತ್ಯೇಕವಾಗಿರುವೆನು ಎಂಬುದನ್ನು ಮರೆತು ಸೃಷ್ಟಿಯೆಲ್ಲವನ್ನೂ ಏಕಾಂತವಾಗಿ ನೋಡುತ್ತಿರುವ ಸುಸಮಯದಲ್ಲಿ ಸುಖದುಃಖ ಭೇದವೆಲ್ಲಿಂದ ಬರಬೇಕು?

ಅರಸನು ಶಿಬಿಕಾಪೂಜೆಯನ್ನು ಮಾಡಿಕೊಂಡು, ಸಪ್ತರ್ಷಿಗಳ ಮಂದಿರಕ್ಕೆ ಹೋಗಿ, ಅವರನ್ನು ಪೂಜಿಸಿಕೊಂಡು ಬಂದನು. ಅವರನ್ನು ‘ಶಿಬಿಕೆಯಲ್ಲಿರುವಾಗ ಶಿಥಿಲ ಸಮಾಧಿಯಾದರೆ ಏನಾಗುವುದು?” ಎಂದು ಕೇಳಬೇಕು ಎನ್ನಿಸಿತು. ‘ಏನಾದರೂ ಆಗಲಿ, ಅನುಭವಿಸುವುದಕ್ಕೆ ಸಿದ್ಧವಾಗಿರುವಾಗ ಕೇಳಬೇಕಾದುದೇನು? ಉಪಾಧಿಗ್ರಸ್ಥನಾಗಿರುವಾಗ ಸಂಭವಿಸುವುದೆಲ್ಲ ಶುಭ ಇಲ್ಲದಿದ್ದರೆ ಅಶುಭ, ಎರಡರಲ್ಲಿ ಒಂದು. ಅವು ಏನಿದ್ದರೂ ಉಪಾಧಿಗೆ ಸಂಬಂಧಪಟ್ಟವು. ಅನುಭವಿಸಿ ತೀರಬೇಕಾದವು. ಅದೃಷ್ಟವಶದಿಂದ ಅವಕ್ಕೆ ವಶನಾಗದಿರುವ ಸ್ಥಿತಿಯು ಲಭಿಸಿದ ಮೇಲೂ ಅವುಗಳಿಗೆ ಒದ್ದಾಡುವುದೇ?’ ಎಂದು ತನ್ನ ಸಂಕಲ್ಪವನ್ನು ತಾನೇ ಹಾಸ್ಯಮಾಡಿಕೊಳ್ಳುತ್ತ ಹಿಂತಿರುಗಿದನು. ಅವರು ಆತನ ಮನೋಭಾವವನ್ನು ಹಿಡಿದು ಮಾತನಾಡಲು ಸಾಧ್ಯವಿಲ್ಲದಂತಹ ಪೂರ್ಣಸ್ಥಿತಿಯಲ್ಲಿದ್ದರು.

ಅಲ್ಲಿಂದ ಬರುವ ವೇಳೆಗೆ ಶಚೀಂದ್ರರೂ ಅಗ್ನಿ ವಾಯುಗಳೂ ಗುರುದ್ವಯರೂ ಯಯಾತಿಯೂ ಬಂದು ಕಾದಿದ್ದಾರೆ. ಅರಸನು ವಿರಜಾಸಮೇತನಾಗಿ ಬಂದು ಆಚಾರ್ಯರುಗಳಿಗೆ ನಮಸ್ಕಾರಮಾಡಿ, ಇಂದ್ರ ಅಗ್ನಿವಾಯುಗಳಿಗೆ ಆಲಿಂಗನವನ್ನು ಕೊಟ್ಟು ನಗುನಗುತ್ತಾ ಎಲ್ಲರನ್ನೂ ಆಸನಗಳಲ್ಲಿ ಕುಳ್ಳಿರಿಸಿ ತಾನು ಕುಳಿತುಕೊಳ್ಳುತ್ತಾನೆ. ಸುರಗುರುವು ಅರಸನ ಮುಖವನ್ನು ನೋಡುತ್ತಾನೆ. ಅರಸನು ಮಂದಹಾಸದಿಂದ “ಹೌದು, ನಾವೂ ಶುಭವರ್ತಮಾನವನ್ನು ಕೇಳಲು ಕಾತರರಾಗಿದ್ದೇವೆ. ನಮ್ಮ ಅವಧಿಯು ತೀರಿ ಏಳು ದಿನವಾಯಿತು. ಆದರೂ ತಮ್ಮೆಲ್ಲರ ಸೌಜನ್ಯದಿಂದ ಇಂದ್ರಪದವಿಯಲ್ಲಿ ಇದ್ದೇವೆ. ನಿತ್ಯೇಂದ್ರನಿಗೆ ಇಂದ್ರತ್ವವನ್ನು ವಹಿಸಿಕೊಟ್ಟು ಶಚೀಸಮೇತವಾಗಿ ಆತನು ಸಿಂಹಾಸನದಲ್ಲಿ ಕುಳಿತು ವಿರಾಜಿಸುವುದನ್ನು ನೋಡಿ, ಕಾಣಿಕೆಯೊಪ್ಪಿಸಿ, ಆತನಪ್ಪಣೆ ಪಡೆದು, ನಾವಿಬ್ಬರೂ ತಪಸ್ಸಿಗೆ ಹೋಗುವುದು ಎಂದುಕೊಂಡಿದ್ದೇವೆ. ಆದರೆ ದೈವಚಿತ್ತ ಹೇಗಿದೆಯೋ? ಯಾರು ಬಲ್ಲರು?”

ಅದರರ್ಥವು ಯಾರಿಗೂ ಆಗಲಿಲ್ಲ. ಆದರೂ ಆಚಾರ್ಯರು ಪರಸ್ಪರ ಮುಖ ನೊಡಿಕೊಂಡರು. ಸುರಾಚಾರ್ಯನ ಅಭಿಮತದಿಂದ ಅಸುರಾಚಾರ್ಯನೆದ್ದು “ಏನೂ ವಿಘ್ನವಿದ್ದಂತಿಲ್ಲ. ಅಥವಾ ಹಠಾತ್ತಾಗಿ ಏನಾದರೂ ತಲೆದೋರಿದರೆ, ಅದನ್ನು ದೂರದಲ್ಲಿಡಲು ತಪಸ್ವಿಗಳು ತಮ್ಮ ಸನ್ನಿಧಾನದಲ್ಲಿದ್ದಾರೆ”