ಪುಟ:Mahakhshatriya.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೈಮುಗಿದುಕೊಂಡು ಹೇಳಿದನು : “ಆದ ದ್ರೋಹವನ್ನು ಕ್ಷಮಿಸಬೇಕು. ಶಿಥಿಲ ಸಮಾಧಿಯಾದ ಅಪರಾಧಕ್ಕೆ ಶಿಕ್ಷೆಯೇನೋ ವಿಧಿಸೋಣವಾಗಲಿ. ಭೂತಪನವಷ್ಟೇಯೋ? ಇನ್ನೂ ಏನಾದರೂ ಉಂಟೋ?”

ಸಪ್ತರ್ಷಿಗಳು ಮುಸಿಮುಸಿ ನಗುತ್ತ ‘ನಾವು ಅಪರಾಧವನ್ನು ತೋರಿಸಿದೆವು. ದಂಡಿಸುವ ಕೆಲಸ ನಿನ್ನದು. ನಿನ್ನ ದಂಡವು ಸರಿಯಿಲ್ಲದೆ ಹೋದರೆ ಆಮೇಲೆ ನಾವು’ ಎಂದರು.

ಅರಸನು ಸರಿಯೆಂದು ವಿಚಾರಗ್ರಸ್ಥನಾಗಿ ಅಲ್ಲಿಯೇ ನಿಂತನು. ಒಂದು ಗಳಿಗೆ ಯೋಚಿಸಿ “ನಹುಷನ ಅಪರಾಧವು ಗುರುತರವಾದುದು. ಈ ಅಪರಾಧಕ್ಕೆ ಶಿಕ್ಷೆಯು ಹೀಗಿರಬೇಕು. ಚೇತನವನ್ನು ಜಡವು ಅಲ್ಲಾಡಿಸಿ ಹೊರಕ್ಕೆ ಎಳೆಯಿತು. ಅದರಿಂದ ಜಡದಲ್ಲಿ ಜಡವಾದ ಅವಸ್ಥೆಯು ಈತನಿಗೆ ಪ್ರಾಪ್ತವಾಗಬೇಕು. ಆದರೆ ಇದು ವಿಧಿನಿಯತವಾಗಿ ಬಂದುದರಿಂದ ಖನಿಜ ಉದ್ಭಿಜ್ಜಗಳಲ್ಲದ ತಿರ್ಯಗ್ಯೋನಿಯಲ್ಲಿ ಹುಟ್ಟಬೇಕು. ಈತನು ಇಂದ್ರನಾಗಿದ್ದಾಗ ಈ ಕಾರ್ಯವು ನಡೆಯಿತಾಗಿ ಈತನು ಎಲ್ಲದಕ್ಕಿಂತ ಮಿಗಿಲಾದ ಅಜಗರವಾಗಿ ಹುಟ್ಟಬೇಕು. ಶಿಕ್ಷೆಯು ಸರಿಯಾಗಿದೆ ತಾನೇ?”

ಎಲ್ಲರೂ ಆತನ ವಿಲಕ್ಷಣ ಸ್ಥೈರ್ಯವನ್ನು ನೋಡಿ ಆಶ್ಚರ್ಯಪಡುತ್ತಾರೆ. “ಇದೇನಿದು ? ತನ್ನ ಅಪರಾಧಕ್ಕೆ ತಾನೇ ಶಿಕ್ಷೆಯನ್ನು ವಿಧಿಸಿಕೊಳ್ಳುವಾಗ ಈತನು ಇನ್ನೊಬ್ಬ ಅಪರಾಧಿಯನ್ನು ಪರಿಗಣಿಸುವಷ್ಟು ನಿರಂಜನನಾಗಿ ಸ್ಥಿರನಾಗಿರುವನಲ್ಲ!” ಎಂದು ಹೆದರಿದ್ದಾರೆ.

ಇಂದ್ರನು ಮುಂದೆ ಬಂದು ಕಣ್ಣೀರು ಒರೆಸಿಕೊಳ್ಳುತ್ತಾ “ಶಿಕ್ಷೆಯು ಸರಿಯಾಗಿದೆ” ಎಂದನು. ಸಪ್ತಋಷಿಗಳಲ್ಲಿ ಒಬ್ಬ ಭಗವಾನರು ಬಂದು ‘ಅಪರಾಧಿಯು ಬ್ರಹ್ಮಜ್ಞನು ಇಂದ್ರನು. ಅದರಿಂದ ಆತನಿಗೆ ಅಜಗರತ್ವ ಪ್ರಾಪ್ತವಾದರೂ ಇಂದ್ರಾನಂದವೂ ಜಾತಿಸ್ಮರತ್ವವೂ ಇರತಕ್ಕದ್ದು’ ಎಂದು ಕೈಯೆತ್ತಿ ಹೇಳಿದರು.

ಶಚಿಯು ಮುಂದೆ ಬಂದು ಅವರಿಗೆ ನಮಸ್ಕರಿಸಿ ಸೆರಗೊಡ್ಡಿ ಬೇಡಿದಳು: “ಈತನು ಸಪತ್ನೀಕನಾಗಿ ತಪೋಲೋಕಕ್ಕೆ ವಾನಪ್ರಸ್ಥನಾಗಿ ಹೋಗಿ ತಪಸ್ಸು ಮಾಡಬೇಕೆಂದಿದ್ದನು. ಇಲ್ಲಿ ವಿರಜಾದೇವಿಯೊಡನೆ ಇಂದ್ರಸಖನಾಗಿ ಕೊನೆಯವರೆಗೂ ಇರುವುದಾಗಿ ನಮಗೆ ವರಕೊಟ್ಟಿದ್ದನು....” ಮುಂದಕ್ಕೆ ಆಕೆಯ ಬಾಯಲ್ಲಿ ಮಾತು ಹೊರಡಲಿಲ್ಲ. ದುಃಖದಿಂದ ಗಂಟಲು ಕಟ್ಟಿಹೋಯಿತು.

ಭಗವಾನರು ಮತ್ತೆ ಹೇಳಿದರು : “ಆತನು ಇನ್ನೂ ಇಂದ್ರ. ಆತನು