ಪುಟ:Mahakhshatriya.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸರಿಯಾಗಿ ಶಿಕ್ಷೆ ವಿಧಿಸಿದನೋ ಇಲ್ಲವೋ ನೋಡುವುದಷ್ಟೇ ನಮ್ಮ ಕೆಲಸ. ಬೇಕಾದರೆ ಆತನೇ ಅಥವಾ ನಾಳೆ ಇಂದ್ರನಾಗುವ ನಿನ್ನ ಪತಿ ಯಾರು ಬೇಕಾದರೂ, ಈ ಶಿಕ್ಷೆಯನ್ನು ವಿಲೋಪ ಮಾಡಬಹುದು. ಆತನಿಗೂ ಸ್ವರ್ಗವಾಸವೂ ತಪೋಲೋಕವಾಸವೂ ತಪ್ಪಿದ್ದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆತನು ಬ್ರಹ್ಮಜ್ಞನು. ನಿರ್ವಿಕಲ್ಪಸಮಾಧಿಗೆ ಹೋಗಬಲ್ಲನು. ಆತನು ಎಲ್ಲಿದ್ದರೆ ಅದು ಬ್ರಹ್ಮಲೋಕಕ್ಕೆ ಮಿಗಿಲಾಗುವುದು” ಎಂದು ಎಲ್ಲರನ್ನೂ ಆಶೀರ್ವಾದ ಮಾಡಿ ಸಪ್ತಋಷಿಗಳು ಅಂತರ್ಧಾನರಾದರು.

ಇಂದ್ರನು ಮುಂದೆ ಬಂದು ನಹುಷನ ಕೈಹಿಡಿದುಕೊಂಡು, “ದೇವಾ ಅಪ್ಪಣೆಯಾದರೆ ನಾನು ಈ ಶಿಕ್ಷೆಯನ್ನು ವಿಲೋಪಮಾಡುವೆನು” ಎಂದನು. ನಹುಷನು ನಗುತ್ತಾ ಆತನ ಕೈಹಿಡಿದು “ಅಪರಾಧಿಯು ನಿನ್ನ ಬಳಿ ಬಂದು ಕೇಳಿಕೊಂಡಾಗ ಆ ಕೆಲಸ. ಅದುವರೆಗೆ ಏನವಸರ ?” ಎಂದು ವಿರಜಾದೇವಿಯ ಕಡೆ ತಿರುಗಿದನು. ಆಕೆ ವಿಸ್ಮಯ ಭೀತಿಗಳಿಂದ ನಿಶ್ಚೇತನಳಾದಂತೆ ಇದ್ದಾಳೆ. ಮಗನ ಆಸರೆಯಿಲ್ಲದಿದ್ದರೆ ಆಕೆಯು ದೇಹಭಾರವನ್ನು ಹೊತ್ತು ನಿಂತೂ ಇರಲಾರಳು. ನಹುಷನು ನೇರವಾಗಿ ಹೋಗಿ ಮಗನ ಭಾರವನ್ನು ತಾನು ವಹಿಸಿಕೊಂಡು ಆಕೆಯನ್ನು ತನಗೆ ಒರಗಿಸಿಕೊಂಡು ಹೇಳಿದನು : “ಈ ಜನ್ಮಾಂತರ ಲಾಭವು ನಿನಗೇನೂ ಇಲ್ಲ ವಿರಜಾ : ನನಗೆ ಮಾತ್ರ. ಯಯಾತಿ, ಈ ಜನ್ಮವು ಭೂಲೋಕದಲ್ಲಿ ಹಿಮಾಲಯ ಪ್ರಾಂತದ ದೇವಭೂಮಿಯಲ್ಲಾಗುವುದು. ಆಗ ನೀನು ಅಭಿಮಾನ ವಹಿಸಿ ಉಪಚಾರಮಾಡಲು ಯತ್ನಿಸಬೇಡ. ಅಲ್ಲಿ ಅಜಗರವಾದಾಗ, ನನಗೆ ಕಷ್ಟವಾಗುವುದು ಎಂದುಕೊಳ್ಳಬೇಡ. ದೇಹವು ತಾನಲ್ಲ ಎಂದು ಬಲ್ಲವನಿಗೆ ಉಪಾಧಿಯ ಕಷ್ಟಗಳಿರುವುದಿಲ್ಲ. ಇನ್ನು ಯಾವಾಗ ಅಲ್ಲಿಂದ ಮುಕ್ತಿ ಎನ್ನುವಿಯೇನೋ ? ಹುಟ್ಟಿದ್ದಕ್ಕೆಲ್ಲ ಕೊನೆಯುಂಟು. ಇಲ್ಲಿ ಸ್ವರ್ಗದಲ್ಲಿ ಪಡುವ ಭೋಗಕ್ಕೆ ಕೊನೆ ಬೇಡ ; ಅಜಗರಜನ್ಮದಲ್ಲಿ ಪಡುವ ಕಷ್ಟಕ್ಕೆ ಕೊನೆಯಿರಲಿ ಎನ್ನುವುದು ಸರಿಯಾದ ಮಾತಲ್ಲ. ಆ ಜನ್ಮವೆತ್ತಿದಾಗ ಆ ಜನ್ಮದ ಆಯುಸ್ಸು ಗೊತ್ತಾಗುವುದು. ನಮ್ಮ ನಿಜರೂಪವು ಇನ್ನು ಮುಂದೆ ತಪೋಲೋಕದಲ್ಲಿ ವಾನಪ್ರಸ್ಥರಾಗಿ, ಇನ್ನೊಂದು ಇಲ್ಲಿ ಇಂದ್ರಸಖರಾದ ದಂಪತಿಗಳಾಗಿ ಮತ್ತೊಂದು. ಅದನ್ನು ನಾನು ಮಾತ್ರ ಪಡೆಯುವೆನು. ಭೂಲೋಕದಲ್ಲಿ ಅಜಗರವಾಗಿ- ಇನ್ನು ಇದನ್ನು ಇಲ್ಲಿಗೇ ಬಿಡೋಣ. ನಾಳೆಯ ಇಂದ್ರಾಭಿಷೇಕದಲ್ಲಿ ಆನಂದಪಡಲು ಸಿದ್ಧರಾಗೋಣ.”

ಎಲ್ಲರಿಗೂ ಹೃದಯವು ಚಿಂತಾಭರವೂ ಆಗಿತ್ತು ; ಸೌಖ್ಯಪೂರ್ಣವೂ