ಪುಟ:Mahakhshatriya.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ತನಗೆ ತಿಳಿಯದೇ ತನಗೆ ಬೃಹಸ್ಪತ್ಯಾಚಾರ್ಯನ ಮೇಲೆ ಏನಾದರೂ ಕೋಪ ಬಂದಿರಬಹುದೇ ? ಅದರಿಂದ ಆತನು ಮೈಗರೆದಿರುವನೋ ?” ಯೋಚನೆಯು ಸಂದೇಹವಾಗಿ, ಸಂದೇಹವು ಬಲವಾಗಿ ಸಿದ್ಧಾಂತವಾಗುವುದಕ್ಕೆ ಅಷ್ಟು ಹೊತ್ತು ಹಿಡಿಯಲಿಲ್ಲ. “ಇರಬೇಕು. ಅಜ್ಞಾತ ಕೋಪವೊಂದು ಮನಸ್ಸನ್ನು ಬಲವಾಗಿ ಒಳಗಿನಿಂದಲೇ ಹಿಡಿದಿರಬೇಕು. ಹೊರಗಿನ ಮನಸ್ಸು ಅದರ ಪ್ರತಿಕೃತಿಯನ್ನು ಭಾವಿಸುತ್ತಾ ‘ನಾನು ನಿರ್ದೋಷಿ ! ದೋಷವೆಲ್ಲ ದೇವಗುರುವಿನದು’ ಎಂದು ಆರೋಪಿಸುತ್ತಿರಬೇಕು. ಹಾಗಾದರೆ ಏನು ಮಾಡಬೇಕು ?”

ಆ ವೇಳೆಗೆ ಶಚೀದೇವಿಯು ಬಂದಳು. ದೇವೇಶ್ವರನು ತನ್ನ ಹೃದಯದೊಳಗಿದ್ದ ಚಿಂತೆಯನ್ನು ಆಕೆಗೆ ಹೇಳಿದನು. ಆಕೆಯು “ಹೌದು ದೇವ, ನಾನೂ ಈಗ ಅದೇ ಸಿದ್ಧಾಂತಕ್ಕೆ ಬಂದಿದ್ದೇನೆ. ನಾವು ದೇವಗುರುಗಳನ್ನು ತಿರಸ್ಕರಿಸಿದ್ದೇವೆ. ಅದರಿಂದ ಆತನಿಗೆ ಕೋಪ ಬಂದು ಆತನು ಮರೆಯಾಗಿದ್ದಾನೆ. ಆತನು ಮರೆಯಾದನೆಂದು ನಮಗೆ ಕೋಪವು ಬಂದಿದೆ. ಅಲ್ಲದೆ, ನಾವು ಹುಡುಕಿದುದೂ ಸಾಲದು ಎಂದು ನನ್ನ ಭಾವನೆ.”

ದೇವೇಂದ್ರನು ಅಡ್ಡ ಬಂದು “ ಇಲ್ಲ ಭಾಮಿನಿ, ದೇವತೆಗಳು ಬೇಕೆಂದಾಗ ತಮ್ಮ ಪ್ರಭಾವವನ್ನು ಆಶ್ರಯಿಸಿ ಇತರರಿಗೆ ಕಾಣದಂತೆ ತಮ್ಮನ್ನು ತಾವು ಮರೆಯಿಸಿಕೊಳ್ಳಬಲ್ಲರು. ಜೊತೆಗೆ ಅವರು ವ್ರತ, ತಪಸ್ಸು ಎಂದು ಕುಳಿತುಬಿಟ್ಟರೆ ಆಗ ಯಾರೂ ಅವರನ್ನು ಕಾಣುವಂತಿಲ್ಲ.

ಒಂದು ವೇಳೆ ಅಂತಹ ಸಮಯದಲ್ಲಿಯೂ ಅವರನ್ನು ಕಾಣಲೇಬೇಕಾಗಿ ಬಂದರೆ?”

ಇಂದ್ರನು ನಕ್ಕನು. ‘ಅದೂ ಕಷ್ಟವಿಲ್ಲ. ಉಪಶ್ರುತಿ ಭಗವತಿಯನ್ನು ಪ್ರಸನ್ನ ಮಾಡಿಕೊಂಡರೆ, ಆಕೆಯು ಆ ದೇವತೆಯಿರುವ ಸ್ಥಳವನ್ನು ತೋರಿಸಿಕೊಡುವಳು. ಅಷ್ಟೇ ಅಲ್ಲ ಆ ದೇವತೆಯನ್ನು ಸಾಕ್ಷಾತ್ಕರಿಸಿಕೊಡುವಳು.”

“ಹಾಗಾದರೆ, ರಹಸ್ಯವನ್ನು ಬಲ್ಲವರಿಗೆ ದೇವತೆಗಳು ಅಗೋಚರರಾಗುವಂತಿಲ್ಲ ?”

“ಹಾಗೇನಿಲ್ಲ. ದೇವತೆಗಳು ಮಿಕ್ಕ ವಿಚಾರದಲ್ಲಿ ಏನು ಬೇಕಾದರೂ ಮಾಡಬಲ್ಲರಾದರೂ ಮಂತ್ರಾಧೀನರು.”

“ಹಾಗಾದರೆ ನಾವು ಸರ್ವತಂತ್ರಸ್ವತಂತ್ರರಲ್ಲವೇನು ? ಬೇಕಾದುದನ್ನು ಮಾಡಲಾರೆವೇನು ?”

“ಅದೂ ಇಲ್ಲ. ಈ ನಿಯತಿಗೆ ನಿಯತಿಯೇ ಕಾಲದ ವಶವಾಗಿರುವುದು.