ವಿಷಯಕ್ಕೆ ಹೋಗು

ಪುಟ:Mahakhshatriya.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಾಜ್ಞೆಯನ್ನು ತಿರಸ್ಕರಿಸಿದ ದುಷ್ಫಲವನ್ನೂ ಅನುಭವಿಸಬೇಕಾದೀತು. ಆದರಷ್ಟಕ್ಕೇ ಬಿಡುವುದಿಲ್ಲವೆನ್ನು, ಆತನನ್ನು ಸಾಧುವಾದದಿಂದಲೇ ಗೆದ್ದುಕೊಳ್ಳುವೆನು. ಅದಿರಲಿ, ನೀನು ಬೃಹಸ್ಪತ್ಯಾಚಾರ್ಯವನ್ನು ಗೊತ್ತು ಮಾಡು. ಇದನ್ನು ನಾನು ಪಕ್ಕಮಾಡಿರುವೆನು.”

ಶಚಿಯು ಅಪ್ಪಣೆಯೆಂದಳು. ಇಂದ್ರನು ಮಗ್ಗುಲಲ್ಲಿ ಕುಳಿತಿದ್ದ ಆಕೆಯನ್ನು ಭುಜಗಳಿಂದ ಹಿಡಿದು ಅಲ್ಲಾಡಿಸುತ್ತಾ “ಉಪಬೃಂಹಣಮಾಡುವಾಗ, ನೀನು ಲೋಕಕ್ಕೆಲ್ಲ ಬೇಕಾದ ಸೌಭಾಗ್ಯ ನೀಡುವವಳು ಎಂಬುದನ್ನು ಮರೆಯದಿರು. ಎದುರಿಗೆ ಬಂದ ದೇವತೆಯು ಅರೆಮನಸ್ಸಿನಿಂದಿದ್ದರೆ ನಮ್ಮ ಪ್ರಾಣವನ್ನು ಅದಕ್ಕೆ ಹೊಯ್ದು ನಮ್ಮ ಇಂದ್ರಿಯಗಳನ್ನು ಅದಕ್ಕೆ ಕೊಟ್ಟು ಅದನ್ನು ದೊಡ್ಡದು ಮಾಡಬೇಕು. ಅದೇ ಉಪಬೃಂಹಣ. ಋಕ್ಕಿನಿಂದ ಬರಮಾಡಿಕೊಂಡು, ಸಾಮದಿಂದ ಉಪಬೃಂಹಣಮಾಡಿ, ನ್ಯೂನಾತಿರೇಕಗಳನ್ನು ಬ್ರಹ್ಮವೇದದಿಂದ ಸರಿಮಾಡಿಕೊಂಡು, ವಿಧಿನಿಯತವಾದ ಆಹುತಿಯನ್ನು ಕೊಟ್ಟರೆ, ಯಾವ ದೇವತೆಯೇ ಆಗಲಿ, ಪ್ರತ್ಯಕ್ಷವಾಗಿಯೇ ತೀರಬೇಕು. ಅದರಿಂದ, ನಿನ್ನ ಉಪಬೃಂಹಣಕ್ಕೆ ಉಪಶ್ರುತಿ ದೇವಿಯು ಬೇಕೇಬೇಕು. ಅರಿವಿರಲಿ” ಎಂದು ವಿಶ್ವಾಸದಿಂದ ಹೇಳಿ ಯಥೋಪಚಾರವಾಗಿ ಕಳುಹಿಸಿಕೊಟ್ಟನು.

ಇಂದ್ರನು ಅದೇ ಆಸನದಲ್ಲಿ ಇನ್ನೂ ಒಂದು ಗಳಿಗೆ ಕುಳಿತಿದ್ದನು. ಆಗಲೇ ವಿಶ್ವರೂಪಾಚಾರ್ಯನ ಬಳಿ ಹೋಗಬೇಕು ಎಂದು ಒಂದು ಮನಸ್ಸು, ದೇವಗುರುವಿನ ಸುದ್ದಿ ತಿಳಿದ ಮೇಲೆ ಹೋಗೋಣವೆಂದು ಒಂದು ಮನಸ್ಸು. ಅಷ್ಟು ಹೊತ್ತು ವಿಚಾರಮಾಡಿ, ಆಗಲೇ ಹೋಗಿ ಆತನ ಮನಸ್ಸು ತಿಳಿದು ಬರಬೇಕು ಎನಿಸಿತು. ಹೊರಟನು.

* * * *