ಪುಟ:Mahakhshatriya.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬.ತುಂಟ ಕುದುರೆಯ ಸವಾರಿ

ವಿಶ್ವರೂಪಾಚಾರ್ಯನು ದಿನದಿನವೂ ಮಾಡುವ ಹವಿರ್ದಾನಾದಿಗಳನ್ನು ಮುಗಿಸಿಕೊಂಡು ಎಂದಿನಂತೆ ವೇದಾಧ್ಯಯನ ಮಾಡುತ್ತ ನಡುಮನೆಯಲ್ಲಿ ಕುಳಿತಿದ್ದಾನೆ. ಪ್ರಹರಿಯು ಬಂದು “ದೇವರಾಜನು ದರ್ಶನವನ್ನು ಬಯಸಿ ತಮ್ಮ ಸಮಯವನ್ನು ನೋಡಿಕೊಂಡು ಬರಲು ಹೇಳಿಕಳುಹಿಸಿದ್ದಾನೆ” ಎಂದು ಅರಿಕೆ ಮಾಡಿದನು. ಆಚಾರ್ಯನು ‘ಇಂದ್ರನನ್ನು ಬರಹೇಳು’ ಎಂದು ಹೇಳಿಕಳುಹಿಸಿ, ತಾನೂ ಇಂದ್ರನನ್ನು ಸ್ವಾಗತ ಮಡಲು ತಕ್ಕ ವೇಷಭೂಷಣಗಳನ್ನು ಧರಿಸಿ ಕುಳಿತುಕೊಂಡನು. ತಲೆಯ ಮೇಲೆ ಮೂರು ತಲೆಗಳಿಗೂ ಹೊಂದಿಕೊಂಡು ಜಟೆಗಳನ್ನು ಮುಚ್ಚುತ್ತ ರತ್ನಕಿರೀಟವು ಶೋಭಿಸುತ್ತಿದೆ. ಕಿವಿಯಲ್ಲಿ ದೇದೀಪ್ಯಮಾನವದ ಜೀವರತ್ನಗಳ ಕುಂಡಲಗಳು ಉಜ್ವಲವಾಗಿವೆ. ದಿವ್ಯಸುಂಗಧವನ್ನು ಹೀರುತ್ತಿರುವ ದಿವ್ಯಪುಷ್ಪಮಾಲೆಗಳು ಕಂಠದಲ್ಲಿ ಮನೋಹರವಾಗಿವೆ. ಅವುಗಳೊಡನೆ ಸ್ಪರ್ಧೆ ಮಾಡುತ್ತಿರುವಂತೆ ಜೀವರತ್ನಗಳ ಮಾಲೆಗಳು ತೇಜೋಮಂಡಲ ವಿರಾಜಿತವಾಗಿ ರಾರಾಜಿಸುತ್ತಿವೆ. ತೋಳುಗಳಲ್ಲಿ ಅಂಗದಗಳು, ಮುಂಗೈಗಳಲ್ಲಿ ಕಟಕಗಳು, ಬೆರಳುಗಳಲ್ಲಿ ಉಂಗುರಗಳೂ ವಿರಾಜಿಸುತ್ತಿವೆ. ಹಾಗೆಯೇ ದಿವ್ಯವಾದ ಪೀತಾಂಬರವನ್ನಟ್ಟು ಅದಕ್ಕೆ ತಕ್ಕ ಉತ್ತರೀಯವನ್ನು ಧರಿಸಿದ್ದಾನೆ. ಕುಳಿತಿರುವ ಭದ್ರಾಸನವು ತಾನು ಹೇಮಮಯವಾಗಿದ್ದರೂ ಕುಳಿತವರಿಗೆ ಮೃದುಪೀಠವಾಗಿರುವೆನೆಂದು ಹೆಮ್ಮೆ ಕೊಚ್ಚಿಕೊಳ್ಳುವಂತೆ ಮೆರೆಯುತ್ತಿದೆ. ಮುಗ್ಗುಲುಗಳಲ್ಲಿ ಎದುರಿಗೆ ಬಂದವರಿಗೆಂದು ರತ್ನಾಸನಗಳು ಸಿದ್ಧವಾಗಿವೆ. ನೆಲವು ಇದೆಯೋ ಇಲ್ಲವೊ ಎಂಬಂತೆ ಸೂಕ್ಷ್ಮವಾಗಿ ಆಸನದ ಪಾದಗಳೆಲ್ಲ ಆಕಾಶದಲ್ಲಿದ್ದಂತೆ ಇವೆ. ಎಲ್ಲೆಲ್ಲಿಯೂ ತೇಜಸ್ಸೇ ತೇಜಸ್ಸಾಗಿ ಸರ್ವವೂ ಪ್ರಕಾಶಮಾನವಾದರೂ ಕಣ್ಣುಕುಕ್ಕುವಷ್ಟು ತೀವ್ರವಲ್ಲದ ಒಂದು ಮನೋಹರ ತೇಜೋಮಂಡಲವಾಗಿ ಸೌಮ್ಯವಾಗಿ ವಿರಾಜಿಸುತ್ತಿವೆ.

ಆಚಾರ್ಯನು ಯೋಚಿಸಿದನು : “ದೇವರಾಜನು ಇಂದು ಬರಲು ಕಾರಣವೇನಿರಬೇಕು? ಅವಸರದಲ್ಲಿ ಬಂದಂತಿಲ್ಲವಾಗಿ ಈ ಕೂಡಲೇ ಮಾಡಬೇಕಾದ ಕಾರ್ಯವೇನೂ ಇರಲಾರದು. ನಾವು ಮಾತಾಮಹರಿಗೆ ಕೊಡುವ