ಪುಟ:Mahakhshatriya.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅದರಿಂದ ಶತ್ರುವೃದ್ಧಿಯನ್ನು ಬಯಸಬಾರದು ಎಂದು ದೇವತೆಗಳು ತಮ್ಮನ್ನು ಪ್ರಾರ್ಥಿಸುವರು.”

“ದೇವಪತಿ, ತಾವು ಹೇಳುವುದು ಸಹಜವಾದುದು. ಆದರೆ ಒಂದನ್ನು ತಾವು ಗಮನಿಸಿದಂತಿಲ್ಲ. ನಾವು ದ್ವಾಮುಷ್ಯಾಯಣರು. ಮಾತಾಪಿತೃಗಳು ಇಬ್ಬರ ಕುಲದವರಲ್ಲಿಯೂ ಭಕ್ತರಾಗಿ ಅವರವರ ಶ್ರೇಯಸ್ಸನ್ನು ಬಯಸತಕ್ಕವರು. ಅದರಿಂದ, ನಾವು ದೇವಾಚಾರ್ಯತ್ವವನ್ನು ವಹಿಸಿಕೊಂಡಿದ್ದರೂ ದೇವಸಹಜವಾದ ದಾನವದ್ವೇಷವನ್ನು ಅಂಗೀಕರಿಸಿದವರಲ್ಲ. ಹಾಗೆ, ಅಂಗೀಕರಿಸಲೂ ಸಾಧ್ಯವಿಲ್ಲದ ಆ ದ್ವೇಷದ ಮಾತನ್ನೇ ಎತ್ತದೆ, ನಾವು ‘ದೇವಾನಾಂ ಸ್ವಸ್ತಿ, ದಾನವಾನಾಂಚ’ ಎಂದೇ ಹೇಳುವವರು. ಆದರೂ, ದೇವರಾಜರ ಮುಖಾಂತರ ಸಲ್ಲಿಸಿದ ದೇವತೆಗಳ ಪ್ರಾರ್ಥನೆಯು ವಿಫಲವಾಗಬಾರದೆಂದು ನಾವು ಹೀಗೆ ವರವನ್ನು ಕೊಡುವೆವು. ನಾವು ಮಾಡುತ್ತಿರುವ ಹವ್ಯದಾನದಿಂದ ಲಭಿಸುವ ದಾನದ ತೇಜಸ್ಸು ಏನಿದ್ದರೂ ನಮ್ಮ ಅನಂತರ ಫಲಿಸುವುದು. ಇನ್ನು ತಾವು ಆ ವಿಚಾರವನ್ನು ಅಷ್ಟಕ್ಕೇ ಬಿಡಬೇಕು. ಅದನ್ನು ಒತ್ತಬಾರದು. ಅಲ್ಲದೆ, ನಾವು ನಮ್ಮ ಕರ್ತವ್ಯವನ್ನು ಮಾಡಿಕೊಂಡು ಹೋಗುವುದರಲ್ಲಿ ಅಡ್ಡಿಯಾಗಿ ವ್ಯಥೆಗೆ ಗುರಿಯಾಗಬಾರದು.”

ಇಂದ್ರನು ಆಚಾರ್ಯನ ಭಾವವನ್ನು ಪೂರ್ಣವಾಗಿ ಗ್ರಹಿಸಿದನು. ಆತನು ಮಾಡುವ ಕಾರ್ಯಕ್ಕೆ ಯಾರೂ ಅಡ್ಡಿ ಬರಬಾರದು. ಅದು ಪ್ರಾರ್ಥನೆಯಲ್ಲ ಆಜ್ಞೆ, ಯಾರಾದರೂ ಅಡ್ಡಿಬಂದರೆ, ಅವರನ್ನು ತಾನು ನಿಗ್ರಹಿಸದೆ ಇರುವುದಿಲ್ಲ. ಆ ನಿಗ್ರಹದಿಂದ ವ್ಯಥೆಗೆ ಗುರಿಯಾದರೆ, ಅದಕ್ಕೆ ತಾನು ಹೊಣೆಯಲ್ಲ. ಇದಿಷ್ಟನ್ನೂ ಕೊಂಚವೂ ಒರಟುತನವಿಲ್ಲದೆ, ಸಹಜವಾಗಿ, ಸರಳವಾಗಿ, ದೃಢವಾಗಿ ಹೇಳಿರುವ ಆಚಾರ್ಯನ ಭಂಗಿಯನ್ನು ನೋಡಿ ಕಡ್ಡಿಯನ್ನು ತುಂಡುಮಾಡುವಂತೆ ಖಡಾಖಡಿಯಾಗಿಯಾದರೂ ವಿರಸವಾಗದಂತೆ ಹೇಳಿದ ಆತನ ಮನೋದಾಢರ್ಯ್‌ವನ್ನು ಕಂಡು, ಇಂದ್ರನು ಸಂತೋಷಪಟ್ಟನು. ಅದರ ಜೊತೆಯಲ್ಲಿಯೇ ಇರುವ ವರಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿ, ಅದನ್ನು ಮಾತಿನಲ್ಲೂ ಹೇಳುತ್ತ “ತಾವು ಕೊಟ್ಟ ವರಪ್ರದಾನದಿಂದ ದೇವತೆಗಳು ತೃಪ್ತರಾಗಿ, ತಮಗೆ ಕೃತಜ್ಞತೆಯನ್ನು ಒಪ್ಪಿಸುವರು. ಆದರೂ ವಿಷಾದ ಬೀಜವು ಅಳಿಯಲಿಲ್ಲ” ಎಂದನು.

ವಿಶ್ವರೂಪನು ನಗುತ್ತ “ದೇವತೆಗಳು ಅಜರ ಅಮರರು ಎಂದು ಪ್ರಖ್ಯಾತಿ. ಬಹುಶಃ ಆ ಖ್ಯಾತಿಯು ದೇವಾಚಾರ್ಯರಾಗಿರುವ ನಮಗೂ ಅನ್ವಯಿಸಿದರೆ ವಿಷಾದ ಬೀಜವು ಇದ್ದರೂ ಇಲ್ಲದಂತೆಯೇ ತಾನೇ? ಅಲ್ಲದೆ, ದೇವತೆಗಳು