ಪುಟ:Mahakhshatriya.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ನೂ ಒಂದು ಗಳಿಗೆಯಾಯಿತು. ಬೃಹಸ್ಪತಿಯು ಬರಲಿಲ್ಲ. ಇಂದ್ರನ ಅಸಮಾಧಾನಕ್ಕೆ ಬಣ್ಣ ಬಂದು ಅದು ಕೋಪದ ಕಡೆಗೆ ಹೊರಳಿತು. ಆದರೆ ತುಂಬಿದ ಸಭೆಯಲ್ಲಿ ಕೋಪಮಾಡಿಕೊಳ್ಳುವುದುಂಟೆ? ಅದೂ ಗುರುವೂ, ಪುರೋಹಿತನೂ ಆದ ಬೃಹಸ್ಪತಿಯ ಮೇಲೆ? ಇಂದ್ರನು ಎಷ್ಟೋ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದಾನೆ. ಇರುವುದನ್ನೆಲ್ಲ ಬಿಟ್ಟು ಇಲ್ಲದುದನ್ನೇ ಎತ್ತಿ ತೋರಿಸುವ ಮನಸ್ಸು ಸಮಾಧಾನವಾಗಲೊಲ್ಲದೆ “ದೇವಗುರುಗಳು ಬಂದಿಲ್ಲವಲ್ಲ?” ಎಂದು ರೇಗಲು ಹವಣಿಸುತ್ತಿದೆ.

ಅಷ್ಟರಲ್ಲಿ ಪ್ರಹರಿಯ ದೀರ್ಘೋಚ್ಚಧ್ವನಿಯು ಕೇಳಿಸಿತು : “ಪುರುಹೂತನಿಗೆ ಪರಾಕ್, ಪುರಂದರನಿಗೆ ಪರಾಕ್, ಮಹೇಂದ್ರನಿಗೆ ಪರಾಕ್, ಶಚೀಪತಿಗೆ ಪರಾಕ್, ಸ್ವರ್ಗಲೋಕಾಧಿಪತಿಗೆ ಪರಾಕ್, ತ್ರಿಲೋಕಾಧಿಪತಿಗೆ ಪರಾಕ್, ತಪೋಲೋಕದಿಂದ ಒಂದು ಮಹರ್ಷಿಗಣವು ದರ್ಶನಾರ್ಥವಾಗಿ ದಯಮಾಡಿಸಿದೆ.” ಪ್ರಹರಿಯ ವಿಜ್ಞಾಪನವು ಮುಗಿಯುತ್ತಿರುವ ಹಾಗೆಯೇ ಸಾಮಗಾನಮಾಡುತ್ತಿರುವ ಮಹರ್ಷಿ ಗಣವು ಪ್ರವೇಶಿಸಿತು. ಅವರನ್ನು ಸ್ವಾಗತಿಸಿ ಕರೆತರಲು ಬೃಹಸ್ಪತಿಯು ಇಲ್ಲವಲ್ಲಾ ಎಂದು ಇಂದ್ರನ ಮನಸ್ಸು ಮತ್ತಷ್ಟು ಕ್ಷುಬ್ಧವಾಯಿತು. ಆದರೂ ಆ ಕ್ಷೋಭವನ್ನು ತೊರಿಸದೆ, ಗಂಭೀರವೃತ್ತಿಯವರಿಗೆ ಸಹಜವಾದ ಗಾಂಭೀರ್ಯವನ್ನು ಬಿಡದೆ, ಯಜ್ಞೇಶ್ವರನಾದ ಅಗ್ನಿಯ ಮುಖವನ್ನು ನೋಡಿದನು. ಅದನ್ನು ತಿಳಿದು ಅಗ್ನಿಯು ಹೋಗಿ ಅವರನ್ನು ಕರೆತಂದನು. ಧರ್ಮಾಧಿಪತಿಯಾದ ಯಮನು ಇಂದ್ರನಾಜ್ಞೆಯಂತೆ ಅವರಿಗೆ ಮಧುಪರ್ಕವನ್ನು ಒಪ್ಪಿಸಿದನು. ಅವರೂ ಋಷಿಸಹಜವಾದ ಕಾಣಿಕೆಗಳನ್ನೂ ಆಶೀರ್ವಾದಗಳನ್ನೂ ಒಪ್ಪಿಸಿ, ಆತನ ಅನುಮತಿಯಿಂದ ಆಸನಗಳನ್ನು ಪರಿಗ್ರಹಿಸಿದರು. ಇಂದ್ರನು ಅವರನ್ನು ಕುಶಲ ಪ್ರಶ್ನೆಗಳಿಂದ ಗೌರವಿಸಿ ಅವರು ಬಂದ ಕಾರಣವನ್ನು ವಿಚಾರಿಸಿದನು. ಅವರು ಹೇಳಿದರು:

“ದೇವರಾಜನಿಗೆ ಸ್ವಸ್ತಿಯಾಗಲಿ. ತಪೋಲೋಕದಲ್ಲಿ ನಮಗೊಂದು ಸಂದೇಹ ಬಂತು. ಅದು ಸಪ್ತರ್ಷಿಗಳ ಅನುಗ್ರಹದಿಂದ ಒಂದು ಪ್ರಶ್ನವಾಯಿತು. ಅವರು ‘ಈ ಪ್ರಶ್ನವನ್ನು ಪುರಂದರನಾದ ಇಂದ್ರನು ಅನುಗ್ರಹಿಸಿ ಬಿಡಿಸಬೇಕು. ನಾವೂ ಆತನ ಅನುಗ್ರಹದಿಂದ ಉತ್ತರವನ್ನು ಹೇಳಬೇಕು. ಅಥವ ಅಗ್ನಿವಾಯುಗಳು ಒಂದು ವೇಳೆ ಹೇಳಿದರೂ ಹೇಳಬಹುದು. ಕೇಳಿನೋಡಿ.’ ಎಂದರು. ನಾವು ಯಜ್ಞೇಶ್ವರನನ್ನು ಅರ್ಚಿಸಿ ಕೇಳಿದೆವು. ಜಾತವೇದನಾದ ಆತನು, ‘ಇಂದ್ರನು ನಮಗೆಲ್ಲಾ ಜ್ಯೇಷ್ಠನು. ಆ ಜ್ಯೇಷ್ಠತ್ವವನ್ನು ಬ್ರಹ್ಮನು ಆತನಿಗೆ ಅನುಗ್ರಹಿಸಿದುದು.