ಪುಟ:Mahakhshatriya.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೂಡುವ ಯಾವ ಆಟದಲ್ಲಿ ತಾನೇ ವಿಷಾದಬೀಜವಿಲ್ಲ ? ಅದರಿಂದ ನಾವಾಡಿದ ಮಾತು ಸಹಜವೇ ಆದಂತಾಯಿತು ತಾನೇ ?” ಎಂದನು.

ದೇವೇಂದ್ರನು ಅದನ್ನೊಪ್ಪಿಕೊಳ್ಳುತ್ತ “ದೇವಾಚಾರ್ಯರು ಕೊಟ್ಟ ವರ ದೇವತೆಗಳ ವರದಂತೆಯೇ ಸಗರ್ಭವಾಗಿದೆ. ಅದರಿಂದ ಏನೂ ಹೇಳುವಂತಿಲ್ಲ ಆಯಿತು. ಇನ್ನೊಂದು ವಿಚಾರ. ಅಪ್ಪಣೆಯಾದರೆ ಬಿನ್ನವಿಸುವೆನು.” ಎಂದನು.

ವಿಶ್ವರೂಪಾಚಾರ್ಯನು ದೇವರಾಜನ ವಿನಯವನ್ನು ನೋಡಿ ಕರಗಿ ಹೋದನು. ಆ ವಿನಯವರ್ತನವನ್ನು ನೋಡಿ, ಅದಕ್ಕೆ ವಶನಾಗಿ ತಾನೂ ಅಷ್ಟೇ ವಿನಯದಿಂದ, “ಆಗಬಹುದು ಸಿದ್ಧವಾಗಿದ್ದೇನೆ” ಎಂದನು.

ಇಂದ್ರನು ಬಹುಗಂಭೀರವಾಗಿ, ಮರ್ಯಾದೆಯಿಂದ, ವಿನಯದಿಂದ, ಪ್ರಸ್ತಾಪಿಸಿದನು. “ಇದೂ ದೇವಗಣಗಳ ಪ್ರಾರ್ಥನೆ. ದೇವಾಚಾರ್ಯರಾದ ತಾವು ಸತತವಾಗಿ ಸುರಾಪಾನ ಮಾಡುತ್ತಿರುವುದು ದೇವಗಣಕ್ಕೆ ಸಮ್ಮತವಿಲ್ಲ. ಅದರಿಂದ ಅವರೆಲ್ಲರೂ ಬೇಕೆಂದರೆ ಸೋಮರಾಜನನ್ನು ಪ್ರಾರ್ಥಿಸಿ, ತಮಗೆ ಯಥೇಚ್ಛವಾಗಿ ಸೋಮವು ಯಾವಾಗಲೂ ಸಿದ್ಧವಾಗಿರುವಂತೆ ಮಾಡಿಕೊಡಲು ಸಿದ್ಧರಾಗಿರುವರು. ತಾವು ಅದನ್ನು ಪರಿಗ್ರಹಿಸಿ ಇದನ್ನು ತ್ಯಜಿಸಬೇಕು.”

ಆಡಿದ ಮಾತಿನಲ್ಲಿ ತಾನು ದೇವಪತಿಯೆಂಬ ಅಹಂಕಾರವಿರಲಿಲ್ಲ. ತನ್ನಪ್ಪಣೆ, ಇದನ್ನು ನಿರಾಕರಿಸಿದರೆ ಶಿಕ್ಷೆಗೆ ಗುರಿಯಾಗಬೇಕೆಂಬ ಭಯವ್ಯಂಜನವಿರಲಿಲ್ಲ. ಮಾತು ಸಹಜವಾಗಿತ್ತು. ಚಿಕ್ಕವರು ದೊಡ್ಡವರಲ್ಲಿ ಬಿನ್ನವಿಸಿಕೊಳ್ಳುವ ರೀತಿಯಿತ್ತು. ಆದರೂ ವಿಶ್ವರೂಪನು ವ್ಯಗ್ರನಾದನು : “ದೇವರಾಜ, ಇವೆಲ್ಲವೂ ಸಹಜವಾಗಿ ದೇವಗುರುಗಳಾದ ಬೃಹಸ್ಪತ್ಯಾಚಾರ್ಯರಲ್ಲಿ ಇರಬೇಕಾದ ಗುಣಗಳು. ದೇವತೆಗಳಿಗೆ ಹೇಳಿ, ‘ವಿಶ್ವರೂಪನು ಏನಿದ್ದರೂ ತಾತ್ಕಾಲಿಕವಾಗಿ ದೇವಾಚಾರ್ಯನಾದವನು. ಆತನು ತಾನಾಗಿ ಬೇಡವೆಂದರೂ ಆಯಿತು. ದೇವರಾಜರಾದ ತಾವು ಬೇಡವೆಂದರೂ ಆಯಿತು, ಹೀಗಿರುವಾಗ, ಮಲ್ಲಿಗೆಯಲ್ಲಿ ಪಾರಿಜಾತದ ಸೌರಭವನ್ನು ಬಯಸುವ ಈ ಬಯಕೆಗಳಿಂದ ಫಲವಿಲ್ಲ” ಎಂದು ಹೇಳಿಬಿಡಿ.

“ಆಚಾರ್ಯ, ಸುರಾಪಾನವು ತಮೋಗುಣವನ್ನು ಬೆಳೆಸುವುದು ; ಸೋಮಪಾನವು ಸತ್ವವಾಗುವ ರಜೋಗುಣವನ್ನು ಬೆಳೆಸುವುದು. ಅದರಿಂದ ದೇವತೆಗಳು ಸೋಮಪಾನವನ್ನು ಬಯಸುವರು.”

ವಿಶ್ವರೂಪನು ಬದ್ಧಭೃಕುಟಿಯಾದನು. “ಇದನ್ನು ನಾನು ತಿಳಿಯೆನೆನ್ನುವೆಯಾ? ದೇವರಾಜ, ಇದೆಲ್ಲವನ್ನೂ ನಾನು ಬಲ್ಲೆ, ಅಷ್ಟೆ ಅಲ್ಲದೆ ಸುರೆಯು ಸೋಮಕ್ಕಿಂತ ಬಲವಾದುದು. ಅದು ಪ್ರಾರ್ಥಿಸಿಕೊಳ್ಳದಿದ್ದರೆ