ಪುಟ:Mahakhshatriya.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸೋಮನನ್ನು ತನ್ನಂತೆ ಮಾಡಿಕೊಳ್ಳಬಲ್ಲದು. ಅದನ್ನೂ ಬಲ್ಲೆ. ಆದರೂ ಆ ತಮೋಗುಣವನ್ನು ಸತ್ವರಜಸ್ಸುಗಳಾಗಿ ಮತ್ತೆ ಯಾರೂ ಏನು ಹೇಳಬೇಕಾಗಿಲ್ಲ. ಬೇಕಾಗಿದ್ದರೆ ನಮ್ಮನ್ನು ಆಚಾರ್ಯರನ್ನಾಗಿ ಇಟ್ಟುಕೊಳ್ಳಬಹುದು. ಇಲ್ಲದಿದ್ದರೆ ಬೇಕಾಗಿಲ್ಲ” ಎಂದನು.

ದೇವರಾಜನು ಹಾಗೆ ತಿರಸ್ಕೃತನಾದರೂ ತನ್ನ ಸೌಜನ್ಯವನ್ನು ಬಿಡದೆ ಹೇಳಿದನು : “ದೇವ, ಆ ಸುರಾಪಾನವೇ ತಮ್ಮನ್ನು ದಾನವಪ್ರೇಮಿಗಳನ್ನಾಗಿ ಮಾಡಿರುವುದು. ಅದು ತಮೋಗುಣವನ್ನು ವರ್ಧಿಸಿ ತಾವೂ ತಮ್ಮ ಪಕ್ಷಪಾತಿಗಳಾಗಿರುವಂತೆ ಮಾಡಿದೆಯೆಂದು ದೇವಗಣದ ಅಭಿಪ್ರಾಯ.”

ವಿಶ್ವರೂಪನು ಹೇಳಿದನು : “ದೇವರಾಜಾ, ಆಗಲೇ ಹೇಳಿದೆನು. ಇದು ನಮ್ಮ ಸ್ವಂತ ವಿಚಾರ. ಇದನ್ನು ನಾವು ಅಂಗೀಕರಿಸಿದ್ದೇವೆ. ಹಸುವನ್ನು ಒಪ್ಪಿಕೊಂಡಾಗ, ಅದರ ಕೊಂಬು, ಬಾಲಗಳನ್ನೂ ಒಪ್ಪಿಕೊಂಡಂತೆ, ನಮ್ಮನ್ನು ಅಂಗೀಕರಿಸಿದವರು ನಮ್ಮ ಕೆಟ್ಟ ಚಾಳಿಗಳನ್ನು ದುರ್ಗುಣಗಳನ್ನು ಅಂಗೀಕರಿಸಬೇಕು. ನಾವು ಪ್ರಾಣವನ್ನಾದರೂ ಬಿಟ್ಟೇವು, ಇದನ್ನು ಬಿಡುವುದಿಲ್ಲ. ಅದರಿಂದ ಇದರಲ್ಲಿ ನಮಗೆ ಸೌಖ್ಯವಿದೆ. ಅದರಿಂದ ಇದರಲ್ಲಿ ನಮಗೆ ವಿಶ್ವಾಸವಿದೆ. ಇನ್ನೂ ಒಂದು ಸಲ ಹೇಳುವೆನು. ನಾವು ಪ್ರಾಣವನ್ನಾದರೂ ಬಿಟ್ಟೇವು, ಸುರಾಪಾನವನ್ನು ಬಿಡುವುದಿಲ್ಲ.

ದೇವರಾಜನಿಗೆ ಸಹಜವಾಗಿ ಕೋಪ ಬಂತು. ಆಚಾರ್ಯನಲ್ಲದೆ ಇನ್ನು ಯಾರೇ ಆಗಿದ್ದರೂ ಅಲ್ಲಿಯೇ ಶಿಕ್ಷಿಸಿ ಬುದ್ಧಿ ಕಲಿಸುತ್ತಿದ್ದನು. ಆದರೆ ಆಚಾರ್ಯನಷ್ಟೇ ಅಲ್ಲ, ತಾನೇ ಹೋಗಿ ಬ್ರಹ್ಮನಾಜ್ಞೆಯೆಂದು ಗೌರವದಿಂದ ವರಿಸಿರುವ ಆಚಾರ್ಯ. ಅದರಿಂದ ಬಂದ ಕೋಪವನ್ನೆಲ್ಲ ನುಂಗಿಕೊಂಡು, “ದೇವಾ, ತಾವು ದೊಡ್ಡವರು. ನಿಯತಿಗೆ ಭಂಗ ತರಬಾರದು. ಆಚಾರ್ಯರಾಗುವ ಮುಂಚೆ ಯಥೇಚ್ಛಾಚಾರವು ಶೋಭಿಸುತ್ತಿತ್ತು. ಈಗ ನಿಯತಾಚಾರವು ಮಾತ್ರ ಶೋಭಿಸುವುದು” ಎಂದನು.

ವಿಶ್ವರೂಪನು ಗಹಗಹಿಸಿ ನಕ್ಕು ಹೇಳಿದನು : “ಈ ಪ್ರಶ್ನಕ್ಕೆ ಆಗಲೇ ಉತ್ತರ ಕೊಟ್ಟಾಗಿದೆ. ಸ್ವೇಚ್ಛೆಯಿಂದ, ಬಯಸಿ ಬಯಸಿ, ಪಡೆದ ಪದವಿಗಾಗಿ ಯಥೇಚ್ಛಾಚಾರವನ್ನು ಬಿಡಬೇಕು. ಯಾದೃಚ್ಛಿಕವಾಗಿ ನಮಗೆ ಬಂದಿರುವ ಪದವಿಯ ಮೋಹ ನಮಗೆ ಇಲ್ಲ ಅದರಿಂದ ನಾವು ನಿಯಂತ್ರಿತರಾಗುವುದಿಲ್ಲ!”

“ನಿಯತಿಯ ನಿಯಮ, ತಿರಸ್ಕಾರವನ್ನು ಸಹಿಸುವುದಿಲ್ಲ ಆಚಾರ್ಯ !”

“ಈ ಬೆದರಿಕೆ ನಮಗಲ್ಲ,ನಿಯತಿಯ ನಿಯಮ ನಮಗಿಲ್ಲ.ಅಲ್ಲದೆ