ಪುಟ:Mahakhshatriya.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬರಬೇಕು. ಇದು ಸರ್ವವ್ಯಾಪಿಯಾದ ನಿನ್ನಿಂದ ಮಾತ್ರ ಸಾಧ್ಯ. ಅದಕ್ಕಾಗಿ ನಿನ್ನನ್ನು ಈಗ ಬರಮಾಡಿಕೊಂಡುದು.”

“ಇಂದ್ರಾಣಿಯ ಅಪ್ಪಣೆಯಾದರೆ ಆಗಬಹುದು. ನೀನು ಮಾಡಿದರೆ ಆಗುತ್ತಿರಲಿಲ್ಲವೇನೋ ?”

“ನಾನು ಮಾಡಿದರೆ, ಎಲ್ಲರಿಗೂ ತಿಳಿದು ಹೋಗುವುದು. ಅದರಿಂದ, ಅಲ್ಲವೆ, ಒಂದು ಮಾತು ಹೇಳಿ ಹೋಗು. ನಿನ್ನೆ ವಿಶ್ವರೂಪಾಚಾರ್ಯನಿಗೂ ದೇವರಾಜನಿಗೂ ಆದ ಮನಃಕ್ಷೋಭದ ವಿಚಾರವಾಗಿ ದಾನವಲೋಕದಲ್ಲಿ ಏನೇನು ಪ್ರತಿಕ್ರಿಯೆಗಳಾಗಿವೆ?”

“ಇದುವರೆಗೆ ವಿಶ್ವರೂಪಾಚಾರ್ಯನು ಬೆಳೆಸಿಕೊಟ್ಟಿರುವ ತೇಜಸ್ಸು ಒಬ್ಬ ಅಸುರಶ್ರೇಷ್ಠನಾಗಲು ಸಾಕಾಗಿದೆ. ಅದನ್ನು ಅವರು ಮುಂದುಮಾಡಿಕೊಂಡು ದೇವಲೋಕದ ಮೇಲೆ ನುಗ್ಗಬೇಕೆಂದಿದ್ದರು. ಆದರೆ ಆತನೇ ಕೊಟ್ಟಿರುವ ನಾರಾಯಣ ಕವಚವು ಅಭೇದ್ಯವೆಂದು ಅವರು ಹೆದರಿ ತಡೆದಿದ್ದರು. ನಿನ್ನೆ ಆಚಾರ್ಯನು ‘ನನ್ನ ಜೀವನದ ಅನಂತರ ಆ ತೇಜಸ್ಸು ಒಟ್ಟುಗೂಡುವುದು’ ಎಂದುದರಿಂದ ದಾನವರಿಗೆ ಹೊಸ ಚೇತನ ಬಂದಿದೆ. ಆದರೆ ವಿಶ್ವರೂಪಾಚಾರ್ಯನು ಎಂದಿಗೆ ಸತ್ತಾನೋ ಎಂದು ಒಳಗೊಳಗೇ ಯೋಚಿಸುತ್ತಿದ್ದಾರೆ. ಅಲ್ಲದೆ, ಅವರು ಶುಕ್ರಾಚಾರ್ಯನನ್ನು ಏಕಾಂತದಲ್ಲಿ ಕಂಡು ಮತ್ತೆ ತಮ್ಮ ಅಭ್ಯುದಯಕಾಲವು ಯಾವಾಗ ಎಂದು ಕೇಳಿದರೆಂದೂ, ಆತನು ಭವಿಷ್ಯತ್ತನ್ನು ನೋಡಿ ಇನ್ನೂ ಕೊಂಚ ಕಾಲ ಕಳೆಯಬೇಕು ಎಂದನೆಂದೂ ವದಂತಿ. ಸಾಲದೆ, ನಿನ್ನೆ ದೇವರಾಜನು ರೇಗಿ ವಿಶ್ವರೂಪನನ್ನು ಘಾತಿಮಾಡುವನು ಎಂದೇ ಅವರ ನಂಬಿಕೆಯಿತ್ತು. ಅಂತೂ ಇನ್ನು ಕೆಲವು ಕಾಲವಾದ ಮೇಲಾದರೂ ಅದು ಆಗಿಯೇ ತೀರುವುದೆಂದು ಅವರ ನಂಬಿಕೆ.”

“ಇದಿಷ್ಟೂ ದೇವರಾಜನಿಗೆ ವರದಿಯಾಗಿದೆಯೇ ?”

“ಹೌದು. ಆಗಿದೆ” -ಎನ್ನುತ್ತಾ ದೇವರಾಜನೇ ಒಳಗೆ ಬಂದನು. ಮೂವರು ಸಂಭ್ರಮದಿಂದ ದೇವರಾಜನಿಗೆ ಅಭಿವಂದಿಸಿ, ಆತನು ಕುಳಿತ ಮೇಲೆ ಆತನಪ್ಪಣೆಯಿಂದ ಸ್ವಸ್ಥಾನಗಳಲ್ಲಿ ಕುಳಿತರು. ಶಚಿಯಪ್ಪಣೆಯಿಂದ ಯಜ್ಞೇಶ್ವರನು ತಾವು ಮಾಡಬೇಕೆಂದಿರುವುದನ್ನು ಹೇಳಿದನು.

ದೇವೇಂದ್ರನು ಹೇಳಿದನು : “ಬ್ರಹ್ಮಲೋಕದಲ್ಲಿ ಬೃಹಸ್ಪತಿಯು ಪ್ರಕಟವಾಗಿರುವನೆಂದು ನನಗೂ ಈಗ ವಾರ್ತೆಯು ಬಂತು. ಅದರಿಂದ, ಅಗ್ನಿವಾಯುಗಳಲ್ಲಿ ಒಬ್ಬರನ್ನು ಕಳುಹಿಸು ಎಂದು ಹೇಳಲು ನಾನು ಇಲ್ಲಿಗೆ