ಪುಟ:Mahakhshatriya.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಂದೆನು. ಅಗ್ನಿಗಿಂತ ಈ ದೌತ್ಯಕ್ಕೆ ವಾಯುವೇ ಸರಿ. ಹೋಗಿ ಬರಲಿ. ನಾನೇನು ಮಾಡಬೇಕೆಂದಿದ್ದೆ ಬಲ್ಲೆಯಾ, ಯಜ್ಞೇಶ್ವರ ? ಉಪಶ್ರುತಿ ದೇವಿಯನ್ನು ಕಳುಹಿಸಿ ಬೃಹಸ್ಪತಿಯನ್ನು ಹುಡುಕಿಸಬೇಕು ಎಂದಿದ್ದೆ.”

“ಆಯಿತು ನಿನ್ನೆಯ ಸಮಾಚಾರವೇನು ?” ಅಗ್ನಿವಾಯುಗಳಿಬ್ಬರು ಸಣ್ಣ ದನಿಯಲ್ಲಿ ಕೇಳಿದರು.

ಇಂದ್ರನು ತಾನು ಹಿಂದಿನ ದಿನ ಅನುಭವಿಸಿದ ಚಿತ್ತಕ್ಷೋಭವನ್ನು ತೋರಿಸುವವನಂತೆ ಹುಬ್ಬುಗಂಟಿಕ್ಕಿಕೊಂಡು, “ನಿನ್ನೆ ಬಹು ಕಷ್ಟದಿಂದ ತಡೆದುಕೊಂಡೆ. ಎರಡು ಸಲ ಆಯುಧವನ್ನು ಹಿರಿದು ಹಾಗೆಯೇ ಹೊಡೆದುಹಾಕಬೇಕೆಂದಿದ್ದೆ. ಕೊನೆಯ ಮಾತಂತೂ ಅದೆಷ್ಟು ನಿಷ್ಠುರ ! ‘ಇತರರಿಗೆ ರಕ್ಷೆಯನ್ನು ಕೊಡಬಲ್ಲವರು ಆತ್ಮರಕ್ಷೆಯನ್ನೂ ಬಲ್ಲರು.’ ಇಂದ್ರನು ರೇಗಿದರೆ ಯಾರ ಆತ್ಮರಕ್ಷೆಯು ಎದುರಾಗುವುದು ನೋಡೋಣೆನ್ನಿಸಿತು. ಅದರೆ ನಾನಾಗಿ ವರಿಸಿದ ಧರ್ಮಾಚಾರ್ಯನೆಂದು ಸುಮ್ಮನಾದೆ. ಅಂತೂ ನನ್ನ ಪಾಲಿಗೆ ಬ್ರಹ್ಮಹತ್ಯೆ ತಪ್ಪಿದುದಲ್ಲ. ಇನ್ನು ಯಾವಾಗಲಾದರೂ ಈತನು ಹೀಗೆ ಮತ್ತೆ ರೇಗಿಸಿದರೆ ಏನಾಗುವುದೋ ಹೇಳಲಾರೆ.”

“ಆಯಿತು ಹಾಗಾದರೆ ಬೃಹಸ್ಪತ್ಯಾಚಾರ್ಯರ ಬಳಿಗೆ ಹೋಗಿಬರಬಹುದಷ್ಟೆ?”

“ಹೋಗಿ ಬನ್ನಿ ಬೃಹಸ್ಪತ್ಯಾಚಾರ್ಯರು ಬರುವುದಾದರೆ, ನನಗೆ ಬ್ರಹ್ಮಹತ್ಯೆಯು ತಪ್ಪಿದುದಲ್ಲ. ಅದನ್ನು ಹೇಗೆ ನಿವಾರಿಸಿಕೊಳ್ಳಬೇಕು, ಅದನ್ನು ನೀವು ಮೂವರೇ ಗೊತ್ತುಮಾಡಿಟ್ಟಿರಿ.”

“ಅದೇನು ಅಷ್ಟು ದೊಡ್ಡ ವಿಷಯವಲ್ಲ. ಪಾಪವು ಅಖಂಡವಾಗಿರದಂತೆ ಒಡೆಯುವುದು. ವರವು ಬೇಕೆಂದವರಿಗೆ ಅದನ್ನೂ ವರವನ್ನೂ ಕೊಡುವುದು.”

‘ಸರಿ. ವಾಯು, ಇನ್ನು ಹೊರಡು. ಬೃಹಸ್ಪತ್ಯಾಚಾರ್ಯರ ಬಳಿಗೆ ಹೋಗಿ ಬಾ. ನಿನಗೆಂದು ನಾವು ಎಷ್ಟು ಹೊತ್ತು ಕಾಯ್ದಿರಬೇಕು ?”

“ಕಾಯಬೇಕಾಗಿಲ್ಲ. ಅಲ್ಲಿ ಅವರು ಮಾತಾಡಿದುದೆಲ್ಲ ಇಲ್ಲಿ ನಿಮಗೆ ಕೇಳಿಸುವಂತೆ ಮಾಡುವೆನು.”

“ಅದು ಸರಿ.”

ವಾಯುವು ಬ್ರಹ್ಮಲೋಕಕ್ಕೆ ಹೋದನು. ಇನ್ನೊಂದು ಕ್ಷಣವಿರಬಹುದು. ಅಷ್ಟರೊಳಗಾಗಿ ಮಾತು ಕೇಳಿಸಿತು. ಮೊದಲು ಆಚಾರ್ಯರಿಗೂ ವಾಯುದೇವನಿಗೂ ಕುಶಲ ಪ್ರಶ್ನಗಳಾಯಿತು. ಆನಂತರ ವಾಯುದೇವನು ಗಂಭೀರವಾಗಿ ಕೇಳಿದನು.