ಪುಟ:Mahakhshatriya.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮.ಪಾಪದ ಮೊದಲು

ಇಂದ್ರನು ತನ್ನ ವಿಶ್ರಾಂತಿಮಂದಿರದಲ್ಲಿ ಶತಪಥ ತಿರುಗುತ್ತಿದ್ದಾನೆ. ಅಗ್ನಿವಾಯುಗಳಿಬ್ಬರೂ ಕಂಭವನ್ನೊರಗಿಕೊಂಡು ನಿಂತಿದ್ದಾರೆ. ಶಚಿ ಅತ್ತ ನಿಂತಿದ್ದಾಳೆ. ಇಂದ್ರನು ಹೇಳಿದನು : “ಕಾರಣಾಂತರಗಳಿಂದ ಅತೃಪ್ತರಾಗಿ ರುವವರನ್ನು ಹುಡುಕಬೇಕು. ಅವರಿಗೆ ಪರಿಗ್ರಹಾಧಿಕಾರವು ಇರಬೇಕು. ಅವರಿಗೆ ಮೊದಲು ಅವರು ಕೇಳಿದ ವರವನ್ನು ಕೊಟ್ಟು ಆ ನಂತರ ಬ್ರಹ್ಮ ಹತ್ಯದ ಪಾಲನ್ನು ಕೊಡಬೇಕು. ಇಲ್ಲವಾದರೆ ಕೆಲಸವು ಕೆಟ್ಟೀತು.”

ಅಗ್ನಿಯು ಹೇಳಿದನು : “ಈ ಕಾರ್ಯಕ್ಕೆ ಅವರಿವರನ್ನು ಕೇಳಿದರೆ ಆಗುವುದಿಲ್ಲ. ಲೋಕವನ್ನೆಲ್ಲಾ ಅನ್ನವನ್ನು ಕೊಟ್ಟು ಕಾಪಾಡುವ ಸೋಮನನ್ನು ಕರೆದು ಕೇಳಬೇಕು.”

ವಾಯುವು ಹೇಳಿದನು : “ಹೊರಗೆ ಅನ್ನವಾಗಿ ಒಳಗೆ ಅನ್ನಾದನಾಗಿ ಇರುವ ಪ್ರಾಣವನ್ನು ಕೇಳಿದರೆ, ಅತೃಪ್ತರು ಯಾರು ಎನ್ನುವುದು ತಿಳಿಯುವುದು. ಆತನು ಎಲ್ಲಕ್ಕೂ ಮೂಲನು.”

ಶಚಿಯು ಹೇಳಿದಳು : “ಸೋಮ, ಪ್ರಾಣ, ಇಬ್ಬರನ್ನೂ ಕೇಳಿದರಾಯ್ತು ಅದಕ್ಕೆ ಏನಂತೆ.”

ಇಂದ್ರನು ಸರಿಯೆಂದನು. ಸೋಮ ಪ್ರಾಣರು ಇಬ್ಬರೂ ಬಂದರು. ಯಥೋಚಿತವಾಗಿ ಆದರ ಪೂರ್ವಕವಾಗಿ ಅವರಿಗೆ ಸತ್ಕಾರವು ಆಯಿತು. ಅಗ್ನಿಯು ಇಂದ್ರನ ಅಪ್ಪಣೆಯಂತೆ ಅವರನ್ನು ಕೇಳಿದನು : “ಈಗೊಂದು ಬ್ರಹ್ಮಹತ್ಯೆಯು ಪ್ರಾಪ್ತವಾಗುವುದರಲ್ಲಿದೆ. ಅದನ್ನು ಹಂಚಿಹಾಕಬೇಕು. ಅದನ್ನು ಭಾಗವಾಗಿ ಸ್ವೀಕರಿಸಿದವರಿಗೆ ಅವರು ಅಪೇಕ್ಷಿಸಿದ ವರವನ್ನು ಕೊಡಲಾಗುವುದು. ಅತೃಪ್ತರಾಗಿ ಹತ್ಯಭಾಗವನ್ನು ಜೀರ್ಣಿಸಿಕೊಳ್ಳಬಲ್ಲವರಾರು ಎಂಬುದನ್ನು ತಿಳಿಯಲು ನಿಮ್ಮನ್ನು ಇಲ್ಲಿಗೆ ಬರಮಾಡಲಾಯಿತು” ಎಂದು ಅವರಿಗೆ ವಿಸ್ತಾರವಾಗಿ ತಿಳಿಯಹೇಳಿದನು. ಸೋಮನು “ವೃಕ್ಷಗಳನ್ನು ಸ್ತ್ರೀಯರನ್ನು” ಎಂದು ಹೇಳಿದನು. “ವೃಕ್ಷಗಳಿಗೂ ಸ್ತ್ರೀಯರಿಗೂ ಒಂದು ಅಂತ್ಯಶೋಕವಿದೆ. ವೃಕ್ಷಗಳನ್ನು ಯಜ್ಞಾರ್ಥವಾಗಿ ಕಡಿದರೆ ಅವುಗಳಿಗೆ ಸದ್ಗತಿಯಾಗುವುದು ಎಂಬ ತೃಪ್ತಿಯುಂಟು. ಆದರೆ ಲೌಕಿಕವಾಗಿ ಕಡಿಯುವಾಗ ಅವಕ್ಕೆ ತಮ್ಮ ಕುಲವೇ ನಾಶವಾಗುವುದಲ್ಲಾ ಎಂಬ ಶೋಕವಿದೆ.