ವಿಷಯಕ್ಕೆ ಹೋಗು

ಪುಟ:Mahakhshatriya.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಳ್ಳವನ್ನು ತೆಗೆದವರು ಮುಚ್ಚುವುದಿಲ್ಲ. ಅದು ತಾನಾಗಿಯೇ ಮುಚ್ಚಿಕೊಳ್ಳುವಂತೆ ವರವನ್ನು ಕೊಡುವುದಾದರೆ ನಾನು ಉಳಿದ ಪಾಪವನ್ನು ಅಂಗೀಕರಿಸುವೆನು. ಆ ಪಾಪವು ನನ್ನಲ್ಲಿ ಊಷರರೂಪವಾಗಿ ಕಾಣಿಸಿಕೊಳ್ಳುವುದು” ಎಂದಳು. ಇಂದ್ರನು ಸಂತೋಷದಿಂದ ಆಕೆಗೆ ವರವನ್ನು ಕೊಟ್ಟನು.

ಇಂದ್ರನಿಗೂ ಇಂದ್ರಾಣಿಗೂ ಪರಮ ಸಂತೋಷವಾಯಿತು. ಬರಲಿರುವ ಬ್ರಹ್ಮಹತ್ಯೆಯು ಇಷ್ಟು ಸುಲಭವಾಗಿ ನಿವಾರಣವಾಗುವುದೆಂದು ಅವರು ಯೋಚಿಸಿರಲಿಲ್ಲ. ಅಲ್ಲದೆ, ಇಂದ್ರನಿಗೆ ಇನ್ನೂ ಒಂದು ಅಧಿಕ ಸಂತೋಷ “ಈ ವರಗಳಿಂದ ಲೋಕವು ಅಭಿವೃದ್ಧಿಯಾಗುವುದು. ಭೂಮಿಯು ಸಂತೋಷಪಟ್ಟು ತನ್ನಲ್ಲಿರುವ ಬೀಜಗಳನ್ನೆಲ್ಲಾ ಬೆಳೆಸುವಳು. ಜಲಗಳು ಎಲ್ಲೆಲ್ಲೂ ತಾವೇ ತಾವಾಗಿ ಸಸ್ಯಗಳನ್ನೂ ಪ್ರಾಣಿಗಳನ್ನೂ ವರ್ಧಿಸುವುವು. ಎಲ್ಲೆಲ್ಲಿಯೂ ಅನ್ನವು ತಾನೇ ತಾನಾಗುವುದು. ಮನುಷ್ಯರು ಅನ್ನವನ್ನು ತಿಂದು ವರ್ಧಿಸುವರು. ಭೋಗಸಂಪನ್ನರಾಗುವರು. ಭೋಗಾಸಕ್ತಿಯು ಹೆಚ್ಚಿದಂತೆಲ್ಲ ಅದರ ಜೊತೆಯಲ್ಲಿಯೇ ಅತೃಪ್ತಿಯೂ ಬೆರೆಯುವುದು. ಅತೃಪ್ತಿಯ ಶಾಂತಿಗಾಗಿ ದೇವತೆಗಳನ್ನು ಪೂಜಿಸುವರು. ಹೀಗೆ ಈಗ ಮಾಡಿರುವ ಕಾರ್ಯದಿಂದ ದೇವತೆಗಳಿಗೇ ಸಂತೋಷವಾಗುವುದು” ಎಂದು ಇಂದ್ರನು ಅಧಿಕಾಧಿಕವಾಗಿ ಸಂತೋಷಪಡುತ್ತ ಮುಂದಿನ ಕಾರ್ಯವನ್ನು ಕುರಿತು ಯೋಚಿಸಿದನು.

ಇಂದ್ರನು ವಿಶ್ವರೂಪನ ದರ್ಶನಾರ್ಥವಾಗಿ ಹೋದನು. ಆಚಾರ್ಯನಿಗೆ ಇಂದ್ರನು ಬಂದಬಂದಾಗಲೆಲ್ಲ ಸುರಾಪಾನದ ವಿಚಾರ ಪ್ರಸ್ತಾಪಿಸುವುದು ಸಮ್ಮತವಿಲ್ಲ. ಅದರಿಂದ ಈ ದಿನ ಮಹೇಂದ್ರನು ಬಂದಿರುವನು ಎಂದು ಪ್ರಹರಿಯು ಹೇಳುತ್ತಿರುವಾಗಲೇ ಆತನಿಗೆ ಕೋಪ ಬಂತು. ಆ ಕೋಪದಲ್ಲಿ “ಇದು ದರ್ಶನ ಸಮಯವಲ್ಲ” ಎಂದು ಹೇಳಿಕಳುಹಿಸಬೇಕು. ಆದರೂ ದಾಕ್ಷಿಣ್ಯಬದ್ಧನಾಗಿ ಇಂದ್ರನನ್ನು ಒಳಕ್ಕೆ ಕರೆಯಿಸಿಕೊಂಡನು. ಇಂದ್ರನು ವಿನಯವಾಗಿ ಪ್ರವೇಶಿಸಿದರೂ, ಆ ವಿನಯದ ಹಿಂದೆ ಕಠೋರ ಮನಸ್ಕತೆಯು ಇತ್ತು ಎನ್ನುವುದನ್ನು ಆಳವಾಗಿ ಪರೀಕ್ಷಿಸುವವರು ಕಂಡುಹಿಡಿಯಬಹುದಾಗಿತ್ತು. ವಿಶ್ವರೂಪನು ಗಂಭೀರವಾಗಿದ್ದು ತನ್ನ ಅಸಮಾಧಾನವನ್ನು ತೋರಿಸಿಕೊಳ್ಳುತ್ತ ಎಂದಿನಂತೆ ‘ವಿಜಯೀಭವ’ ಎಂದು ಆಶೀರ್ವದಿಸಿದನು.

ತಾನಿನ್ನು ಕೃತ್ಯಕಾರ್ಯನಾದೆನೆಂದು ಇಂದ್ರನು ಹರ್ಷಿಸುತ್ತ ತಾನು ಬಂದ ಕಾರ್ಯವನ್ನು ಪ್ರಸ್ತಾಪಿಸಿದನು : “ಆಚಾರ್ಯ, ನಾನಿಂದು ಮತ್ತೆ ದೇವಗಣದ ಪರವಾಗಿ ಬಂದಿರುವೆನು.....”