ಪುಟ:Mahakhshatriya.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧೀರನೆಂದು ತನ್ನನ್ನು ತಿರಸ್ಕರಿಸುವವನನ್ನು ತಿರಸ್ಕರಿಸದೆ ಇರಲು ಅಸಾಧ್ಯವಾಯಿತು. ಆತನು ತಾನು ಕಟ್ಟಿದ್ದ ಮರ್ಯಾದೆಯ ಸಂಕಲೆಗಳನ್ನೆಲ್ಲಾ ಕಿತ್ತೆಸೆದನು. ಅಲ್ಲದೆ, ಈ ಕಾರ್ಯ ಮಾಡಿದರೆ ಇದರಿಂದ ಆಗುವ ಹಾನಿಯಿಷ್ಟೇ ಎಂದು ಗೊತ್ತು ಮಾಡಿಕೊಂಡಿದ್ದನಾಗಿ ಆತನಿಗೆ ಧೈರ್ಯವೂ ತಾನೇತಾನಾಯಿತು. ಜೊತೆಯಲ್ಲಿ ಕೋಪವೂ ಬೆಳೆಯಿತು. ಇದಿಷ್ಟೂ ಒಂದೇ ಕ್ಷಣದಲ್ಲಿ ನಡೆದು ಹೋಗಿ ಆ ಕೋಪ, ಅಸಹನೆಗಳಲ್ಲಿ ತಾನು ಏನು ಮಾಡುತ್ತಿರುವೆನೆಂಬುದನ್ನು ವಿಚಾರಿಸುವುದರೊಳಗಾಗಿ ಕೈಯು ಖಡ್ಗವನ್ನೆಳೆಯಿತು. ಏಕೆ ಎನ್ನುವುದರೊಳಗೆ ಖಡ್ಗಪ್ರಯೋಗವಾಗಿ, ವಿಶ್ವರೂಪನ ರುಂಡ ಮುಂಡಗಳು ಬೇರಾದವು. ರುಂಡವು ಕೆಳಗೆ ಬಿದ್ದಿದ್ದರೂ ಆ ಅಟ್ಟಹಾಸವು, ಆ ತಿರಸ್ಕಾರದಿಂದ ಹೊರಟ ಅಪಹಾಸ್ಯದ ಒರಟು ನಗುವು ಇನ್ನೂ ಒಂದು ಸಲ ಆ ಮುಖಗಳಿಂದ ಹೊರಟಿತು. ದಾನವೇಂದ್ರರೆಷ್ಟೋ ಜನರನ್ನು ತುಂಡರಿಸಿದ್ದ ಶತ್ರುಂಜಯನು ಅ ಮುಖಗಳಿಂದ ಹೊರಹೊರಟ ಅಟ್ಟವಿಕಟಾಟ್ಟಹಾಸವನ್ನು ಕೇಳಿದನು. ಆ ಕಣ್ಣುಗಳಲ್ಲಿ ತಾನೇ ತಾನಾಗಿದ್ದ ಆ ಕ್ರೂರ ತೇಜಸ್ಸನ್ನು ಕಂಡನು. ಆತನಿಗೆ ಭ್ರಾಂತಿಯಾಯಿತು. ಕಡಿದುರುಳಿಸಿರುವ ಆ ರುಂಡಗಳು ಮತ್ತೆ ಹಾರಿ ಬಂದು ಕಂಠಸ್ಥಳದಲ್ಲಿ ಕುಳಿತುಕೊಂಡಂತಾಯಿತು. ಅವು ಮತ್ತೆ ತನ್ನನ್ನು ತಿರಸ್ಕರಿಸಿದಂತೆ ಆಯಿತು. ಏನೋ ಗಾಬರಿಯಾಯಿತು. ಅಲ್ಲಿಂದ ಓಡಿ ಹೋಗಬೇಕು ಎನ್ನಿಸಿತು. ಕಾಲು ಕಿತ್ತರೂ ಕೀಳಲಾರದಂತೆ ಕೀಲಿಸಿರುವಂತಾಗಿ, ವಿಕಾರವಾಗಿ, ಚೀರುತ್ತ ದೇವರಾಜನು ಬಿದ್ದುಹೋದನು. ಆ ಮುಖಗಳಿಂದಲೂ ಆ ದೇಹದಿಂದಲೂ ಏನೋ ಒಂದು ವಿಚಿತ್ರವಾದ ತೇಜೋಧೂಮವು ಹರಡಿದಂತೆಯೂ, ಅದು ತನ್ನನ್ನು ಸುಡುತ್ತಿರುವಂತೆಯೂ ಭಾಸವಾಗಿ, ಅದನ್ನು ಸಹಿಸಲಾರದೆ, ಮತ್ತೂ ಒಮ್ಮೆ ಕಿರುಚಿಕೊಂಡು ಮೂರ್ಛಿತನಾದನು.

* * * *