ಬಡಗಿಯನ್ನು ಕರೆಸಿದನು. “ವಿಶ್ವರೂಪಾಚಾರ್ಯನ ಮನೆಯಲ್ಲಿ ಅವನ ತಲೆಗಳು ಬಿದ್ದಿವೆ. ಅವು ಏಕವಾಗಿರದಂತೆ ಮೂರಾಗಿ ಕಡಿದು ಬಾ. ನಿನಗೆ ಬೇಕಾದುದನ್ನು ಕೊಡುವೆನು” ಎಂದು ಅವನಿಗೆ ಪ್ರಲೋಭವನ್ನು ಹುಟ್ಟಿಸಿ, ಅವನಿಗೆ ಇಷ್ಟವಿಲ್ಲದಿದ್ದರೂ, ಅವನನ್ನು ಬಲವಂತವಾಗಿ ಆ ಕಾರ್ಯಕ್ಕೆ ನಿಯೋಜಿಸಿದನು.
ಬಡಗಿಯು ಹೋಗಿ ನೋಡಿದನು. ವಧೆಯಾಗಿ ಅಷ್ಟು ಹೊತ್ತಾಗಿದೆ. ರುಂಡವೂ ಮುಂಡವೂ ಪ್ರತ್ಯೇಕವಾಗಿ ಬಿದ್ದಿವೆ. ಅವುಗಳಿಂದ ಸುರಿದ ನೆತ್ತರೂ ಹೆಪ್ಪು ಕಟ್ಟಿಕೊಂಡಿದೆ. ಇಷ್ಟಾದರೂ ಮುಖದ ತೇಜಸ್ಸು ಕಂದಿಲ್ಲ. ಬಿಟ್ಟ ಕಣ್ಣುಗಳು ಎದುರು ಬಂದವನನ್ನು ಅಂಜಿಸುವಂತಿವೆ. ಬಡಗಿಗೆ ಇನ್ನೂ ಆಚಾರ್ಯನು ಬದುಕಿರುವನೋ ಎಂದು ಸಂದೇಹ ಬರುವಂತಿದೆ.
ಅವನು ತಾನೊಬ್ಬನೇ ಆ ಕಾರ್ಯವನ್ನು ಮಾಡಲಾರದೆ ಅಲ್ಲಿಂದ ಓಡಿ ಹೋದನು. ಆದರೂ ಇಂದ್ರನಪ್ಪಣೆ, ಮೀರುವಂತಿಲ್ಲ. ಅದರಿಂದ ಇನ್ನೊಬ್ಬನನ್ನು ಕರೆದುಕೊಂಡು ಬಂದು, ಇಬ್ಬರೂ ಸೇರಿ ಮುಂಡವನ್ನು ಇನ್ನೊಂದೆಡೆಗೆ ಸಾಗಿಸಿದರು. ರುಂಡವನ್ನು ಅಭಿಮುಖವಾಗಿ ಬೇರ್ಪಡಿಸಲಾರದೆ, ಅದನ್ನು ಮೊಗವಡಿಮಾಡಿ, ಕೊಡಲಿಯಿಂದ ಕಡಿದು ಅದನ್ನು ಬೇರ್ಪಡಿಸಿದರು.
ಇಂದ್ರನಿಗೆ ಶತ್ರುನಾಶವಾಯಿತೆಂದು ಸಂತೋಷವಾಗಿದ್ದರೂ, ದೇವಕುಲವೆಲ್ಲವೂ ತನ್ನ ಕಾರ್ಯವನ್ನು ಒಪ್ಪಿಕೊಳ್ಳುವುದೆಂಬ ನಂಬಿಕೆಯಿದ್ದರೂ, ಇನ್ನೂ ಏನೋ ದಿಗಿಲು. ಬೃಹಸ್ಪತ್ಯಾಚಾರ್ಯನು ಮತ್ತೆ ಧರ್ಮಾಚಾರ್ಯ ನಾದನೆಂದು ಒಂದು ಸಮಾಧಾನವಿದ್ದರೂ ದೈತ್ಯರು ಈ ಸಂಧಿಯನ್ನು ಸಾಧಿಸಿ ಮತ್ತೇನು ಕುತಂತ್ರವನ್ನು ಹೂಡುವರೋ ಎಂದು ಪ್ರಬಲವಾದ ಸಂದೇಹ.
ಹೀಗೆ ಡೋಲಾಯಮಾನಚಿತ್ತನಾಗಿ ಅಗ್ನಿವಾಯುಗಳನ್ನು ಕರೆಸಿಕೊಂಡನು. ಪಾತಾಳದಲ್ಲಿ ದಾನವಕುಲವು ಏನು ಮಾಡುತ್ತಿರುವುದು ಎಂಬುದನ್ನು ತಿಳಿಯಬೇಕು ಎಂದು ಕೂತೂಹಲ. ಅಗ್ನಿಯು “ಮೊದಲು ವಿಶ್ವರೂಪನ ಕಳೇಬರವನ್ನು ಅವನ ತಂದೆಯಾದ ತ್ವಷ್ಟೃಬ್ರಹ್ಮನ ಬಳಿಗೆ ನಾವೇ ಕಳುಹಿಸಿಬಿಡೋಣ, ಇನ್ನೆಲ್ಲಿಂದಲೋ ಆತನಿಗೆ ವರ್ತಮಾನ ತಿಳಿಯುವುದಕ್ಕಿಂತ ಮುಂಚೆ ನಾವೇ ತಿಳಿಸುವುದೇ ಸರಿ” ಎಂದು ಹೇಳಿದನು. ಇಂದ್ರನು ಅದನ್ನು ಒಪ್ಪಿಕೊಂಡು ಆತನ ಮುಖಾಂತರವೇ ಆ ಕಳೇಬರವನ್ನೂ ರುಂಡ ಮುಂಡಗಳನ್ನೂ ಪ್ರತ್ಯೇಕವಾಗಿಟ್ಟು ತ್ವಷ್ಟೃಬ್ರಹ್ಮನ ಬಳಿಗೆ ಕಳುಹಿಸಿದನು. ಆ ಕಳೇಬರಕ್ಕೆ ಚಂದನಾದಿ ಸುಗಂಧದ್ರವ್ಯಗಳನ್ನು ಲೇಪಮಾಡಿ, ಆತನ ಅಂತಸ್ತಿಗೆ ತಕ್ಕಂತೆ ವಸ್ತ್ರಭೂಷಣಗಳನ್ನು ಅಳವಡಿಸಲಾಗಿತ್ತು.
ಇತ್ತ ವಾಯುವು ಇಂದ್ರನಾಜ್ಞೆಯಂತೆ, ಪಾತಾಳಲೋಕಕ್ಕೆ ಹೋಗಿಬಂದನು.