ಪುಟ:Mahakhshatriya.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೂಡಿಸುತ್ತಿದ್ದನಲ್ಲ? ಅಂತಹ ಆಚಾರ್ಯನಿಗೆ ಅಪರಾಧಮಾಡಬಹುದೆ? ಇವನಂತೆಯೇ ಅವನು ದೇವಯೋನಿಯಾಗಿರಲು ಅವನು ಇವನಿಗೆ ಸ್ವಜನನಾದನಲ್ಲ ! ಸ್ವಜನರಿಗೆ ವಿಘಾತಿಯನ್ನು ಮಾಡಿ ಕುಲಕಳಂಕಿಯಾಗಬಹುದೆ? ಎಲ್ಲದಕ್ಕಿಂತ ಹೆಚ್ಚಾಗಿ ಆತನು ವೇದಾಧ್ಯಯನ ಸಂಪನ್ನನಲ್ಲ? ಹಗಲಿರುಳೂ ವೇದಾಧ್ಯಯನ ಮಾಡುತ್ತ ವೇದಮಂತ್ರಗಳಿಗೆಲ್ಲ ವೀರ್ಯವತ್ತತೆಯನ್ನು ಸಂಪಾದಿಸಿ ಕೊಡುತ್ತಿದ್ದನಲ್ಲಾ? ಅವೂ ಅವನನ್ನು ಕಾಪಾಡಲಾರದೆ ಹೋದವಲ್ಲಾ?” ಎಂದು ಅನೇಕ ವಿಧವಾಗಿ ಪರಿಪರಿಯಾಗಿ ಗೋಳಾಡಿದನು.

ದಾನವರು “ಇಂದ್ರನ ಅಹಂಕಾರವು ಮೇರೆ ಮೀರಿದೆ ನಿಜ. ಅದನ್ನು ಏನಾದರೂ ಮಾಡಿ ಮಟ್ಟಹಾಕದಿದ್ದರೆ ಉಳಿಯುವಂತಿಲ್ಲ. ನಿಮ್ಮಂತಹವರಿಗೆ ವಿಶ್ವರೂಪನನ್ನು ಮಗನನ್ನಾಗಿ ಪಡೆಯಬಲ್ಲ ನಿಮ್ಮಂತಹವರಿಗೆ - ಇಂತಹ ಘೋರಾಪರಾಧವನ್ನು ಮಾಡಿದನೆಂದರೆ ಇತರರನ್ನು ಲಕ್ಷಿಸುವನೆ? ಮೊದಲು ಮಟ್ಟಹಾಕಬೇಕು. ತಾವು ಆ ಕೆಲಸವನ್ನು ಮಾಡುವಿರಾ? ಅಥವಾ ನಾವು ಮಾಡೋಣವೆ? ವಿಶ್ವರೂಪಾಚಾರ್ಯನು ನಮ್ಮಲ್ಲಿ ಪಕ್ಷಪಾತವನ್ನು ತೋರಿಸುತ್ತಿದ್ದನೆಂದೇ ಇಂದ್ರನು ಹೀಗೆ ಆತನನ್ನು ವಧೆ ಮಾಡಿದುದು. ಆದ್ದರಿಂದ ಈ ಸೇಡು ತೀರಿಸುವ ಭಾರವು ನಮ್ಮದು. ನೀವು ಹೇಳಿದಂತೆ ಮಾಡಲು ನಾವು ಸಿದ್ಧರಾಗಿರುವೆವು. ನಮ್ಮ ಶುಕ್ರಾಚಾರ್ಯರೂ ತಮಗೆ ಸಹಾಯಕ್ಕೆ ಬರಲು ಸಿದ್ಧರಾಗಿರುವರು” ಎಂದು ಅವರು ಉರಿಯುವ ಬೆಂಕಿಗೆ ತುಪ್ಪವನ್ನು ಸುರಿದಂತೆ ಮಾತಾಡಿದರು.

ತ್ವಷ್ಟೃವು ಪುತ್ರಶೋಕದ ಆವೇಗದಲ್ಲಿ ವಿಶ್ವರೂಪನ ತಾಯಿಯು ಅನುಭವಿಸುತ್ತಿರುವ ಅಪಾರವಾದ ದುಃಖವನ್ನು ನೋಡಲಾರದೆ, ಅವಳಿಗೆ ಸಮಾಧಾನವಾಗಲೆಂದು ಲೋಕವನ್ನು ಅನಿಂದ್ರಿತವಾಗಿ ಮಾಡುವ ಯಾಗವೊಂದನ್ನು ಸಂಕಲ್ಪಿಸಿದನು. ಇಂದ್ರಶತ್ರುವನ್ನು ಪಡೆದು ಇಂದ್ರನನ್ನು ನಿರ್ಮೂಲ ಮಾಡಬೇಕೆಂದು ಉದ್ದೇಶಿಸಿದನು. ಘೋರವಾದ ಈ ಉದ್ದೇಶದಿಂದ ಮಾಡುವ ಯಾಗಕ್ಕೆ ಬರಲು ದೇವರ್ಷಿಗಳೂ ಮಹರ್ಷಿಗಳೂ ಸಮ್ಮತಿಸದಿರಲು, ತ್ವಷ್ಟೃವು ಅಸುರಗುರುವಾದ ಶುಕ್ರಾಚಾರ್ಯರನ್ನು ಸಹಾಯಕ್ಕಿಟ್ಟುಕೊಂಡು ಯಾಗವನ್ನು ಮಾಡಿಯೇ ಮಾಡಿದನು.

ಬ್ರಹ್ಮನಿಗೂ ಈ ಸುದ್ದಿಯು ತಿಳಿಯಿತು. “ಇದೇನಿದು ಅಸಂಪ್ರದಾಯ ಕ್ರಮ? ತನಗೆ ಪ್ರಾಪ್ತವಾದ ಪುತ್ರಶೋಕವನ್ನು ಕಳೆದುಕೊಳ್ಳಲು ತ್ರಿಲೋಕಾಧಿಪತಿಯನ್ನು ನಿರ್ಮೂಲ ಮಾಡುವುದೆಂದರೇನು?” ಎಂದು ವಿಷಾದಪಟ್ಟರೂ “ಆಗಲಿ, ಇದೂ