ಪುಟ:Mahakhshatriya.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದ ಫಲ” ಎನ್ನುತ್ತಾರೆ. “ಬ್ರಹ್ಮಹತ್ಯೆಯನ್ನು ಮಧ್ಯಮಲೋಕದಲ್ಲಿ ಹಂಚಿದ ಫಲವಿದು” ಎಂದು ಯಾರೂ ಚಿಂತಿಸುವುದೂ ಇಲ್ಲ. ಅದೇ ತಾನೇ ಸ್ವಭಾವ ! ಕೆಟ್ಟುದು ಬಂದಾಗ ಇತರರಿಂದ ಬಂತು ಎಂದು ಬಯ್ಯುವುದು, ಒಳ್ಳೆಯದು ಆದಾಗ ಅದು ತನ್ನಿಂದ ಆಯಿತು, ತಾನುಮಾಡಿದ ಪ್ರಯತ್ನದ ಫಲ ಎನ್ನುವುದು. ಆದರೆ, ಒಳ್ಳೆಯದು ಯಾವುದು? ಕೆಟ್ಟುದು ಯಾವುದು ಎಂದು ಗೊತ್ತುಮಾಡಿರುವವರು ಯಾರು? ಅವರವರ ರಾಗದ್ವೇಷಗಳಿಂದ ಗೊತ್ತಾಗುವ ಸುಖದುಃಖಗಳಿಗೆ ಕಾರಣವಾದ ಒಳ್ಳೆಯದು ಕೆಟ್ಟುದು ಇವಕ್ಕೆ ನಿಯತ ಸ್ವರೂಪವುಂಟೇನು? ಕಾಲ ದೇಶವರ್ತಮಾನಗಳಿಂದ ಬದಲಾಯಿಸುವ ಈ ಒಳ್ಳೆಯದು ಕೆಟ್ಟುದು ಇವಕ್ಕೆ ಖಚಿತವಾದ ಸ್ವರೂಪವಿದೆ ಎಂದುಕೊಂಡಿದೆ ಲೋಕ. ಅವುಗಳನ್ನು ಅಳೆಯುವ ಕೋಲು ತನ್ನ ಮನಸ್ಸಿನಲ್ಲಿದೆ ಎಂಬುದನ್ನು ಕಾಣದು.

ಮಧ್ಯಲೋಕದಲ್ಲಿ ಧರ್ಮಕ್ಕಿಂತ ಅರ್ಥಕಾಮಗಳ ಮೇಲೆ ಜನಕ್ಕೆ ಅಭಿಮಾನವು ಹೆಚ್ಚುತ್ತಿರುವುದನ್ನು ನೋಡಿ ಪಾತಾಳವು ‘ಇದು ನಮ್ಮ ವೃತ್ರನ ಪ್ರಭಾವ’ ಎನ್ನುತ್ತಿದೆ. “ನೋಡಿ, ನಮ್ಮ ವೃತ್ರಾಸುರನ ಪ್ರಭಾವ ಮನುಷ್ಯ ಲೋಕವನ್ನೆಲ್ಲಾ ಆವರಿಸಿದೆ. ಗುರುಕುಲ ಬೇಕೆ ? ಜನಗಳ ಮನಸ್ಸು ಎತ್ತಕಡೆ ತಿರುಗಿದೆ ನೋಡಿ. ಎಲ್ಲರೂ ಅರ್ಥಕಾಮಗಳ ಕಡೆ ತಿರುಗಿದ್ದಾರೆ. ಯಾರಿಗಾದರೂ ಧರ್ಮ ಬೇಕಾಗಿದೆಯೇ ? ಅಥವಾ ಧರ್ಮಮಾಡುವವರೂ ಆಡಂಬರವಾಗಿ ನಿಜ ವೈಭವವನ್ನು ಪ್ರದರ್ಶಿಸಲು ಮಾಡುತ್ತಿರುವರೇ ಹೊರತು ಅಲ್ಲಿಂದಾಚೆಗೆ ಇನ್ನೇನಾದರೂ ಉದ್ದೇಶವಿದೆಯೇ ನೋಡಿ. ದೇವತೆಗಳ ಆಟ ಇನ್ನು ಸಾಗುವಂತಿಲ್ಲ ಅವರದೆಲ್ಲ ಮುಗಿಯುತ್ತ ಬಂತು. ಅಬ್ಬಾ ! ತಮ್ಮ ಕೈ ಮೇಲಾದಾಗ ಅವರು ಏನೇನು ಮಾಡಿಬಿಟ್ಟರು ? ಇರಲಿ, ಇನ್ನೆರಡು ದಿನ ಅವರನ್ನು ಮೂಲೆಗುಂಪು ಮಾಡಿ ಸ್ವರ್ಗದಲ್ಲಿಯೂ ನಮ್ಮ ಪ್ರಭುತ್ವವನ್ನು ಸ್ಥಾಪಿಸದಿದ್ದರೆ ನಾವೇಕೆ ಆದೇವು?” ಎಂದು ದಾನವೇಂದ್ರರು ಅತೀವ ಸಮಾಧಾನದಿಂದ ಮೀಸೆ ತಿರುವುತ್ತಾರೆ.

ವೃತ್ರಾಸುರನು ಹೆಚ್ಚುತ್ತಿರುವ ತನ್ನ ಪ್ರಭಾವಪ್ರತಾಪಪೌರುಷಗಳನ್ನು ನೋಡಿಕೊಳ್ಳುತ್ತ ತನ್ನ ಅನುಯಾಯಿಗಳಾದ ದಾನವೇಂದ್ರರಿಗೆಲ್ಲ “ಅವಸರವಿಲ್ಲ ಇಂದ್ರನನ್ನು ಕಳಿತ ಬಾಳೆಯ ಹಣ್ಣನ್ನು ಕಿವುಚಿಹಾಕುವ ಹಾಗೆ ಕಿವುಚಿ ಬಿಡುತ್ತೇನೆ. ಬೆಕ್ಕು ಇಲಿಯ ಮರಿಯನ್ನು ನುಂಗುವ ಹಾಗೆ ನುಂಗಿಬಿಡುತ್ತೇನೆ. ಇನ್ನೇನು ಕೆಲವು ದಿನಗಳು ತಡೆಯಿರಿ ! ಕೊಂಚ ತಡೆದುಕೊಳ್ಳಿ” ಎನ್ನುತ್ತಾನೆ. ದಾನವೇಂದ್ರರು ಹಿಂದೆ ತಮಗೆ ದೇವತೆಗಳಿಂದ ಆದ ಅಪರಾಧಗಳನ್ನೆಲ್ಲಾ ಹೇಳಿಕೊಳ್ಳುತ್ತಾರೆ.