ಪುಟ:Mahakhshatriya.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಾರ್ಥನೆ ಮಾಡಿಕೊಂಡೆ. ದೇವಗುರುವಾಗಿ, ದೇವತೆಗಳಿಗೆ ಸಲ್ಲದ ರೀತಿಯಲ್ಲಿ ನಡೆಯಬಾರದು ಎಂದು ಎಷ್ಟು ಕೇಳಿಕೊಂಡೆ ! ಎಷ್ಟು ಜನರಿಂದ ಹೇಳಿಸಿದೆ ! ಆದರೂ ಆತನು ತನ್ನ ಕೆಟ್ಟ ಚಾಳಿಯನ್ನು ಬಿಡಲಿಲ್ಲ. ಅದೂ ಇರಲಿ, ಆ ಕೊನೆಯ ದಿವಸ ! ಆತನು ಅದೆಷ್ಟು ತಿರಸ್ಕಾರದಿಂದ ನಡೆದುಕೊಂಡ ! ನಾನು ದೇವೇಶ್ವರನೆಂಬುದು ಲಕ್ಷ್ಯವೇ ಇಲ್ಲದೆ, ‘ನೀನೇನು ಮಾಡಬಲ್ಲೆ ನೋಡೋಣ’ ಎಂದು ಎದೆಯನ್ನು ಚಾಚಿ ನಿಂತನಲ್ಲ ! ಆಗ ನಾನು ಕಡಿದು ಹಾಕದೆ ಇನ್ನೇನು ಮಾಡಬಹುದಾಗಿತ್ತು ? ಈಗ ಎಲ್ಲರೂ ‘ನೀನು ಮಾಡಿದೆ, ನೀನು ಮಾಡಿದೆ’ ಎಂದು ನನ್ನನ್ನು ಆಕ್ಷೇಪಿಸುವರಲ್ಲ ! ಆಗ ಏಕೆ ಬಂದು ವಿಶ್ವರೂಪಾಚಾರ್ಯನಿಗೆ ಹೇಳಬಾರದಾಗಿತ್ತು ? ಇವರನ್ನು ಬೇಡವೆಂದಿದ್ದವರು ಯಾರು ? ಎಂದು ಎದುರಿಗಿಲ್ಲದ ಅಹಿತೈಷಿಗಳನ್ನು ಕುರಿತು ನಿಂದಿಸುತ್ತಾನೆ. ಹಾಗೆಯೇ ಅಲ್ಲಿಂದ ಮುಂದೆ ತ್ವಷ್ಟೃವು ಕಶ್ಯಪನ ಮಾತನ್ನು ನಿರಾಕರಿಸಿದುದು, ಕೃತ್ಯವನ್ನು ಮಾಡಿದುದು, ಆ ಕೃತ್ಯವಿಂದು ತನ್ನನ್ನು ತಿನ್ನಲು ಕಾದಿರುವುದು, ಎಲ್ಲವೂ ಚಿತ್ರಪಟದಂತೆ ಮನಃಫಲಕದಲ್ಲಿ ಹಾದು ಹೋಗುತ್ತದೆ.

“ಹಾಗಾದರೆ ಈ ಕೃತ್ಯವು ನನ್ನನ್ನು ತಿನ್ನುವುದೇನು ! ನಾನು ಅಮರನಲ್ಲ! ಅಮೃತವನ್ನು ಸೇವಿಸಿರುವೆನಲ್ಲ ! ನನ್ನನ್ನು ಈ ಕೃತ್ಯವೆಂತು ಕೊನೆಗಾಣಿಸುವುದು? ಸಾಯಿಸುವಂತಿಲ್ಲ, ಈ ಮನ್ವಂತರದ ಕೊನೆಯವರೆಗೆ ಯಾರೂ ನನ್ನನ್ನು ಏನೂ ಮಾಡುವಂತಿಲ್ಲ, ಆದರೆ ಈ ಕೃತ್ಯ ! ಹಾಗಾದರೆ ನನ್ನನ್ನು ಇದೇನು ಮಾಡುವುದು? ವೃತ್ರನು ‘ಆ ಇಂದ್ರನನ್ನು ಹಿಡಿದು ತಿಂದುಬಿಡುವೆನು’ ಎಂದು ಹೇಳಿಕೊಂಡು ತಿರುಗುತ್ತಿರುವನಂತೆ ! ಅವನ ಆಕಾರವನ್ನು ನೋಡಿದರೆ ಅದು ಅಸಾಧ್ಯವಲ್ಲ. ಆದರೆ, ನನ್ನನ್ನು ಜೀರ್ಣಿಸಿಕೊಳ್ಳುವನೆ ? ನನ್ನನ್ನು ಜೀರ್ಣಮಾಡುವ ಅಗ್ನಿಯು ಹುಟ್ಟಿಲ್ಲ, ಇಂದಿನಿಂದ ನಾನು ಅದಕ್ಕೆ ಸಿದ್ಧನಾಗಿರಬೇಕು. ಅವನು ನನ್ನನ್ನು ಹಿಡಿದುಕೊಳ್ಳದಂತೆ ನೋಡಬೇಕು. ಗವಿಯಂತಿರುವ ಆ ಬಾಯೊಳಕ್ಕೆ ನನ್ನನ್ನು ಹಾಕಿಕೊಳ್ಳದಂತೆ ಎಚ್ಚರವಾಗಿರಬೇಕು. ಒಂದುವೇಳೆ ನುಂಗಿಯೇಬಿಟ್ಟರೆ ? ಆ ಜಠರಕುಹರದಿಂದ ತಪ್ಪಿಸಿಕೊಂಡು ಬರಲೂ ಸಿದ್ಧನಾಗಿರಬೇಕು.”

ಇಂದ್ರನಿಗೆ ಆ ಯೋಚನೆಯು ಬಹು ಭಯಂಕರವಾಯಿತು. ಕೆಟ್ಟ ಕನಸು ಕಾಣುತ್ತಿರುವವನು ಭಯಂಕರವಾದ ಏನೋ ಒಂದನ್ನು ಕಂಡು ಹೆದರಿ, ಕಿಟಾರನೆ ಕಿರಿಚುವಂತೆ, ಆತನಿಗೂ ಕಿರಿಚಿಕೊಳ್ಳಬೇಕೆನ್ನಿಸಿತು. ಆ ವೇಳೆಗೆ ತಾನು ಯಾರು ಎಂಬುದು ನೆನಪಾಗಿ ಕಿರುಚಿಕೊಳ್ಳುವುದು ತಪ್ಪಿದರೂ ಅಲ್ಲಿ ಕುಳಿತಿರಲು ಆಗಲಿಲ್ಲ. ಅಲ್ಲಿಂದ ಎದ್ದು ಯಾರೋ ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿರುವರು