ಪುಟ:Mahakhshatriya.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಂದುಕೊಂಡು ಹೆದರಿ ಓಡಿಹೋಗಬೇಕೆಂದುಕೊಂಡನು. ಯಾರೊಡನೆಯೂ ಹೇಳಿಕೊಳ್ಳುವಂತಿಲ್ಲ, ಹಾಗೆಂದು ಸುಮ್ಮನಿರುವಂತಿಲ್ಲ, ಬಾಹ್ಯಪ್ರಜ್ಞೆಯಿದೆ. ತಾನು ದೇವೇಂದ್ರನೆಂಬುದು ಗೊತ್ತಿದೆ. ತಾನು ಕುಳಿತಿರುವ ಮಂದಿರದ ಬಾಗಿಲಲ್ಲಿ ಪ್ರಹರಿಯು ಕಾದು, ಸಾಯುಧನಾಗಿ ನಿಂತಿರುವುದು ಗೊತ್ತಿದೆ. ಹಾಗೆಯೇ ತನ್ನ ಅಂತಃಕರಣದಲ್ಲಿ ನಡೆದ ಯೋಚನೆಯು ತೀವ್ರವಾಗಿ ತನ್ನ ಮನೋಬಲವೇ ಅದಕ್ಕೆ ದೊರೆತು, ಅದು ನಿಜಕ್ಕಿಂತ ನಿಜವಾಗಿ ಎದುರಿಗೆ ನಿಂತಿದೆ. ಕಣ್ಣೆದುರು ನಿಂತು ಅಂಜಿಸುತ್ತಿದೆ. ವೃತ್ರನು ಎದುರಿಗೆ ನಿಂತಿದ್ದಾನೆ. ‘ಇದೋ ನಿನ್ನನ್ನು ಹಿಡಿದು ನುಂಗುವೆ’ ಎನ್ನುತ್ತಿದ್ದಾನೆ. ಅದನ್ನು ಸುಳ್ಳೆಂದು ನಿರಾಕರಿಸುವುದೆಂತು ?

ಒಂದು ಸಲ ನಕ್ಕು ಇದೆಲ್ಲ ಭ್ರಾಂತಿಯೆಂದುಕೊಂಡನು. ವಿಶ್ವರೂಪಾಚಾರ್ಯನನ್ನು ವಧೆಮಾಡಿದಾಗ, ಆತನ ದೇಹದಿಂದ ಎದ್ದು ಬಂದು ಧೂಮವು ತನ್ನನ್ನು ಸೋಕುತ್ತಿದ್ದ ಹಾಗೆಯೇ ತನಗೆ ಜ್ಞಾನ ತಪ್ಪಿದುದು ನೆನಪಾಗಿ ‘ಈ ವೃತ್ರಕೃತ್ಯವು ತತ್ಫಲವಾಗಿ ಬಂದುದು. ಇದನ್ನೆಂತು ಸುಳ್ಳು ಎನ್ನಲಿ? ಎಂದೆನ್ನಿಸಿತು. ಹಾಗೆಯೇ ಆ ತೋರುತ್ತಿರುವ ಚಿತ್ರವು ನಿಜ. ಸುಳ್ಳಲ್ಲ ಎನ್ನಿಸಿತು. ಇಂದ್ರನು ಇನ್ನೊಂದು ಗಳಿಗೆಯೊಳಗಾಗಿ ಅಲ್ಲಿ ನಿಲ್ಲಲಾರದೆ ಹೋದನು. ಆ ಮಂದಿರದಲ್ಲೆಲ್ಲಾ ವೃತ್ರನು ತುಂಬಿರುವಂತೆ ಭಾಸವಾಯಿತು. ಅಲ್ಲಿರುವ ಜೀವರತ್ನವೊಂದೊಂದೂ ಒಬ್ಬೊಬ್ಬ ವೃತ್ರನಾಗಿರುವಂತೆ. ಕಂಭ, ಬೋದಿಗೆಗಳೂ ವೃತ್ರರಾಗಿರುವಂತೆ ಅಷ್ಟೇನು? ಇಂದ್ರನ ಸಾವಿರ ಕಣ್ಣುಗಳೂ ಸಾವಿರ ಜನ ವೃತ್ರರನ್ನು ಕಂಡಂತೆ ಆಗಿ, ವೃತ್ರನ ವಿಶ್ವರೂಪವನ್ನು ನೋಡುತ್ತ ಮಹೇಂದ್ರನು ವಿಹ್ವಲನಾಗಿ, ಹೆದರಿ, ಅಲ್ಲಿ ನಿಲ್ಲಲಾರದೆ, ಎದ್ದು ಓಡಿದನು. ಬಾಗಿಲಲ್ಲಿರುವ ಪ್ರಹರಿಯು, ಬಾಗಿಲನ್ನು ತೆರೆದುಕೊಂಡು ಬಂದು, ಹಿಂದು ಮುಂದು ನೋಡದೆ ಓಡುತ್ತಿರುವ ಇಂದ್ರನ ಹಿಂದೆ ಹೋಗಬೇಕೋ ಅಥವಾ ಮಂದಿರದ ಬಾಗಿಲಲ್ಲಿಯೇ ನಿಂತಿರಬೇಕೋ ತಿಳಿಯದೆ ತಬ್ಬಿಬ್ಬಾಗಿ ನಿಂತ ಕಡೆಯೇ ನಿಂತುಬಿಟ್ಟನು.

ಮಂದಿರದಿಂದ ಹೊರಬಿದ್ದ ಇಂದ್ರನು ವಾಯುವೇಗ ಮನೋವೇಗಗಳಿಂದ ಓಡಿದನು. ಅಭ್ಯಾಸವು ಆತನನ್ನು ದೇವಗುರುಗಳಾದ ಬೃಹಸ್ಪತ್ಯಾಚಾರ್ಯರ ಭವನಕ್ಕೆ ಕರೆದೊಯ್ದಿತು. ಬಾಗಿಲಲ್ಲಿ ನಿಂತಿರುವವನನ್ನು ಕೇಳಿ ಪ್ರವೇಶಿಸಬೇಕು ಎನ್ನುವ ಶಿಷ್ಟಾಚಾರವನ್ನೂ ಮೀರಿ ಒಳನುಗ್ಗಿದನು. ದೌವ್ವಾರಿಕನು ಈತನನ್ನು ತಡೆಯುವುದೋ ಒಳಬಿಡುವುದೋ ಎಂದುಕೊಳ್ಳುವುದರೊಳಗಾಗಿ, ಮಹೇಂದ್ರನು ದೇವಗುರುಗಳ ಸಮೀಪವರ್ತಿಯಾಗಿದ್ದಾನೆ. ಅಲ್ಲಿ ನಾಲ್ವರು ದೀಕ್ಷಿತರು ರಕ್ಷೋಘ್ನ ಮಂತ್ರಗಳನ್ನು ಪಾರಾಯಣ ಮಾಡುತ್ತಿದ್ದಾರೆ. ಅಲ್ಲಿ ಪಕ್ಕದ ಚುತುಶ್ಯಾಲೆಯಲ್ಲಿ