ಪುಟ:Mahakhshatriya.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಗ ಅವನು ದಿನ ದಿನವು ಅಧಿಕಾರವನ್ನು ಭೋಗಿಸಬೇಕು. ಎಂದರೆ, ತನ್ನ ಪುಣ್ಯವೆಂಬ ಪಣವನ್ನು ಕೊಟ್ಟು ಅದನ್ನು ಕೊಂಡುಕೊಳ್ಳಬೇಕು. ಅದರಿಂದ ಅವನ ಇಂದ್ರತ್ವವು ಸಾಂತವಲ್ಲದೆ ಅನಂತವಲ್ಲ.”

“ಹಾಗಾದರೆ, ಅವನು ಅಮರನಲ್ಲವೆ ?”

“ಅದು ನನಗೆ ತಿಳಿಯದು. ಆದರೆ ಅನುಮಾನಬಲದಿಂದ, ಅವನು ನಿನ್ನಂತೆ ಅಮರನಲ್ಲ ಎಂದು ನಾನು ಭಾವಿಸುತ್ತೇನೆ. ಏನೇ ಆಗಲಿ, ನೀನಂತೂ ಅವನಿಗೆ ಇಂದ್ರತ್ವವನ್ನು ಬಿಟ್ಟುಕೊಡಲೇಬೇಕು. ಅವನಷ್ಟು ದಿನ ಇಂದ್ರನಾಗಿಯೇ ತೀರಬೇಕು.”

“ಹಾಗಾದರೆ ಯುದ್ಧವಿಲ್ಲದೆ ಇಂದ್ರತ್ವವನ್ನು ಬಿಟ್ಟುಕೊಡಬೇಕೆ ?”

“ಅದು ಕೂಡದು. ಆಗ ನೀನು ಹೇಡಿಯಂತೆ ನಡೆದಂತಾಗುವುದು. ಯುದ್ಧಕ್ಕೆ ಸಿದ್ಧನಾಗಿರು. ಇನ್ನು ಸ್ವಲ್ಪಕಾಲದಲ್ಲಿಯೇ ಯುದ್ಧವೂ ಆಗುವಂತೆ ತೋರುವುದು. ಆದರೆ ಒಂದು ಕೆಲಸ ಮಾಡು. ಯುದ್ಧಕ್ಕೆ ಮೊದಲೋ, ಯುದ್ಧವಾದ ಮೇಲೋ, ಸಾಧ್ಯವಾದಾಗ ಶ್ರೀಮಹಾವಿಷ್ಣುವನ್ನು ನೋಡು. ಲೋಕಸ್ಥಿತಿ ಕಾರಣನಾತನು. ಆತನು ಏನು ಮಾಡಬೇಕು ಎಂಬುದನ್ನು ಹೇಳುವನು.”

“ಹಾಗೆಯೇ ಆಗಲಿ, ಗುರುದೇವ. ತಾವು ಹೇಳಿದಂತೆ, ಅನಿಷ್ಟ ಪರಿಹಾರವನ್ನು ಕುರಿತು ಚಿಂತಿಸುತ್ತ ಇರುವುದಕ್ಕೆ ಪ್ರತಿಯಾಗಿ, ಅದು ಯಾವ ರೂಪದಲ್ಲಿ ಬಂದರೂ ಸರಿಯೆಂದು ಸಿದ್ಧನಾಗಿರುವೆನು. ಆದರೆ ಅಪಾಯವನ್ನು ಎದುರಿಸುವ ಉಪಾಯವನ್ನು ಸಿದ್ಧಮಾಡಿಕೊಳ್ಳದಿರುವುದು ಸರಿಯಲ್ಲ. ಅದರಿಂದ ತಾವೂ ದಯಮಾಡಿಸಿದರೆ, ಒಮ್ಮೆ ಮಹಾವಿಷ್ಣುವಿನ ಬಳಿಗೆ ಹೋಗಿಬರೋಣ.”

“ಆಗಬಹುದು”

ಇಂದ್ರನು ದೇವಗುರುವಿಗೆ ನಮಸ್ಕಾರ ಮಾಡಿ ಆತನಪ್ಪಣೆ ಪಡೆದು, ಹೊರಟು ಹೋದನು.

****