ಪುಟ:Mahakhshatriya.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩.ಮಹಾಪೂಜೆ

ಇಂದು ದಧೀಚಿ ಮಹರ್ಷಿಗಳ ಆಶ್ರಮದಲ್ಲಿ ಅವರಿಗೆ, ದೆವತೆಗಳೆಲ್ಲರೂ ಸೇರಿ ಒಂದು ಮಹಾಪೂಜೆಯನ್ನು ಒಪ್ಪಿಸುತ್ತಾರೆ. ದೇವಗುರುಗಳಾದ ಬೃಹಸ್ಪತ್ಯಾಚಾರ್ಯರು, ದೇವರಾಜನಾದ ಇಂದ್ರ, ದೇವಮುಖ್ಯರಾದ ಅಗ್ನಿ, ವಾಯು ಮೊದಲಾದವರು ಎಲ್ಲರೂ ಅಲ್ಲಿ ನೆರೆದಿದ್ದಾರೆ. ಆಶ್ರಮದ ಮರಮರ, ಗಿಡಗಿಡಗಳ ಎಲೆಎಲೆಯ ಮೇಲೂ ಒಬ್ಬೊಬ್ಬ ದೇವತೆಯು ಬಂದು ನೆಲೆಸಿದೆ. ವಿಚಿತ್ರವಾದ ಮಂಟಪವೊಂದು ಸಿದ್ಧವಾಗಿದೆ. ನಾನಾ ವರ್ಣಗಳ ಮಿಂಚುಗಳು, ಮೋಡಗಳು, ಅಲ್ಲಲ್ಲಿ ಇದ್ದು ಈ ಮಂಟಪಕ್ಕೆ ಶೋಭಾವಹವಾಗಿವೆ. ಒಂದು ಮೂಲೆಯಲ್ಲಿ ಅಪ್ಸರೋನರ್ತನವು ನಡೆಯುತ್ತಿದೆ. ಹಿಮ್ಮೇಳದ ಗಂಧರ್ವರ ಮದ್ದಳೆಯೊಡನೆ ಮೋಡಗಳ ಸಣ್ಣ ಗುಡುಗು ಸೇರಿದೆ. ನಂದನದ ಕಲ್ಪವೃಕ್ಷಗಳು ಅಲ್ಲಿನ ಮಹಾವೃಕ್ಷಗಳಲ್ಲಿ ನಿಂತು ಬೇಕಾದವರಿಗೆ ಬೇಕಾದುದನ್ನು ಕೊಡಲು ಸಿದ್ಧವಾಗಿದೆ. ಚಿಂತಾಮಣಿಯು ಬಂದು ಅಲ್ಲಿ ದೊಡ್ಡ ದೊಡ್ಡ ರತ್ನಸ್ತಂಭಗಳಾಗಿ, ಚಿನ್ನದ ತೊಲೆ, ಬೆಳ್ಳಿಯ ಹಲಗೆಗಳಿಂದ ಒಂದು ಮೂಲಮಂಟಪವನ್ನು ರಚಿಸಿದೆ. ಆ ವೈಭವಕ್ಕೆ ತಕ್ಕಂತೆ ಮಹರ್ಷಿಗಳು ಕುಳಿತುಕೊಳ್ಳಲು ವಿಚಿತ್ರ ರತ್ನಾಸನವೊಂದು ಸಿದ್ಧವಾಗಿದೆ. ದೇವಗುರುಗಳಿಗೂ ದೇವರಾಜನಿಗೂ ದೇವಮುಖ್ಯರಿಗೂ ಸೊಗಸಾದ ಆಸನಗಳು ಪ್ರತ್ಯೇಕ ಪ್ರತ್ಯೇಕವಾಗಿ ಏರ್ಪಟ್ಟಿವೆ.

ಸಕಾಲವಾಗುತ್ತಲೂ ದಧೀಚಿಮಹರ್ಷಿಯು ದಯಮಾಡಿಸಿದನು. ದೇವಗುರುವು ಮಂತ್ರಗಳನ್ನು ಹೇಳುತ್ತಿರಲು, ದೇವರಾಜನು ಅವರಿಗೆ ದಿವ್ಯಗಂಗೋದಕದಿಂದ ಅಭಿಷೇಕವನ್ನು ಮಾಡಿದನು. ಕಾಮಧೇನುವಿನ ಹಾಲು, ಆ ಹಾಲಿನಿಂದಾದ ಮೊಸರು ತುಪ್ಪಗಳಿಂದ, ಕಲ್ಪವೃಕ್ಷವು ಒದಗಿಸಿದ ಮಧುಶರ್ಖರಗಳಿಂದ ಅಭಿಷೇಕವಾಯಿತು. ನಂದನವನದ ಹೂಮಾಲೆಗಳನ್ನು, ದಿವ್ಯಗಂಧಾನುಲೇಪನವನ್ನು ಒಪ್ಪಿಸಿದರು. ಅಮೃತ ಖಂಡವನ್ನು ತಂದು ನಿವೇದಿಸಿದರು. ಕರ್ಪೂರದ ಆರತಿಯನ್ನು ಎತ್ತಿದರು. “ಬ್ರಹ್ಮಜ್ಞನಿಗೆ ಜಯವಾಗಲಿ. ಪರಿಪೂರ್ಣಸ್ವರೂಪನಿಗೆ ಜಯವಾಗಲಿ, ಪೂರ್ಣಕಾಮನಾದ ಈ ಆತ್ಮಸ್ವರೂಪನಿಗೆ ಒಪ್ಪಿಸಿದ ಈ ನಮ್ಮ ಪೂಜೆಯು ಸಫಲವಾಗಲಿ” ಎಂದು ಪ್ರಾರ್ಥನೆಯನ್ನು ಸಲ್ಲಿಸಿ ಪೂಜೆಯನ್ನು ಮುಗಿಸಿದರು.