ಪುಟ:Mahakhshatriya.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಧೀಚಿಯು ದೇಹಭಾವವನ್ನು ತ್ಯಜಿಸಿ ಕೇವಲ ಬ್ರಹ್ಮಸ್ವರೂಪನಾಗಿ ಕುಳಿತು ಪೂಜೆಯನ್ನೆಲ್ಲ ಸ್ವೀಕಾರಮಾಡಿದನು. ಪೂಜಾಂತ್ಯದಲ್ಲಿ ಬಹಿರ್ಮುಖವಾಗಿ “ದೇವತೆಗಳು ಸಲ್ಲಿಸಿದ ಈ ಪೂಜೆಯಿಂದ ಅವರು ಸಕಾಮರಾಗಲಿ, ಏನು ವರಬೇಕೋ ಕೇಳಿ” ಎಂದನು. ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿ, ಅಮೃತಗಳನ್ನು ಪಡೆದಿರುವ ದೇವತೆಗಳು ಬ್ರಹ್ಮಜ್ಞನಾದ ದಧೀಚಿಯ ಮುಂದೆ ವರಗಳನ್ನು ಕೇಳಿಕೊಳ್ಳುತ್ತಿದ್ದಾರೆ. ಆತನು, ದೇಹದಲ್ಲಿರುವ ಜಡಭೂತಗಳ ತನ್ಮಾತ್ರೆಗಳು ಪರಿಪೂರ್ಣತೆಯನ್ನು ಕಕ್ಕುತ್ತಲಿರಲು, ಆಕಾಶದಲ್ಲಿರುವ ಶಬ್ದವೆಲ್ಲ ಪಿಂಡೀಕೃತವಾಗಿ ಸಂಚಲಿತವಾದಂತೆ, ದೇಹ ದೇಹದಲ್ಲಿಯೂ ಪ್ರತ್ಯೇಕ ಪ್ರತ್ಯೇಕವಾಗಿ ನಿಂತಿದ್ದರೂ, ವಿಶ್ವವನ್ನೆಲ್ಲ ವ್ಯಾಪಿಸಿರುವ ಪ್ರಾಣವೇ ಮೂರ್ತಿವೆತ್ತು ಬಂದು, ತನ್ನಿಂದ ಬಂದಿರುವ ದೇವತೆಗಳನ್ನು ಅನುಗ್ರಹಿಸುವಂತೆ, ವರವನ್ನು ಕೊಡುತ್ತಿದ್ದಾನೆ. ವಿಶ್ವವ್ಯಾಪಕಗಳಾಗಿ, ಬ್ರಹ್ಮಾಂಡವನ್ನೆಲ್ಲ ರಚಿಸಿರುವ ಪಂಚಭೂತಗಳು ತೃಪ್ತಗಳಾಗಿ, “ಶ್ರುತಿ ಭಗವತಿಯು ನುಡಿದಿದ್ದಳು. ‘ಬ್ರಹ್ಮಸ್ವರೂಪನಾದವನಿಗೆ ದೇವತೆಗಳೆಲ್ಲರೂ ಬಲಿಯನ್ನು ಒಪ್ಪಿಸುವರು’ ಎಂದು. ಅದನ್ನಿಂದು ಕಂಡೆವು. ದೇಹಾಭಿಮಾನ ಶೂನ್ಯವಾಗಿ ಪರಿಪೂರ್ಣ ವಸ್ತುವಿನಲ್ಲಿ ಅಪ್ಯಯವನ್ನು ಪಡೆದ ಮಹಾನುಭಾವನಿಂದ ದೇವತೆಗಳು ವರವನ್ನು ಪಡೆಯುವರೆಂದು ಇಂದು ಕಂಡೆವು. ಈ ಮಹಾತ್ಮನಿಗೆ ಪೂಜೆಯನ್ನು ಒಪ್ಪಿಸಿ, ಬ್ರಹ್ಮಾಂಡವನ್ನೇ ತೃಪ್ತಿಪಡಿಸಿದ ದೇವತೆಗಳಿಗೆ ಇಚ್ಛಾಪೂರ್ಣವಾಗದಿರುವುದೆಂತು ?” ಎಂಬ ಸಂತೋಷದಿಂದ ನರ್ತಿಸಿದುವು.

ಬ್ರಹ್ಮಾಂಡದಲ್ಲಿರುವ ಪಿಂಡಾಂಡವೊಂದೊಂದನ್ನೂ ಸಂಘಟಿಸುವ ಪಂಚ ಮಹಾಭೂತಗಳು ತಮ್ಮ ಸ್ಥೂಲಸೂಕ್ಷ್ಮಕಾರಣಾವಸ್ಥೆಗಳಲ್ಲಿಯೂ ತೃಪ್ತವಾದುವು ಎಂದ ಮೇಲೆ ಬ್ರಹ್ಮಾಂಡದಲ್ಲಿರುವ ಸ್ಥಾವರ ಜಂಗಮಗಳೆಲ್ಲವೂ ಖನಿಜ, ಉದ್ಭಿಜ, ಸ್ವೇದಜ, ಅಂಡಜ, ಜರಾಯಜ ಎಂಬ ಪಂಚವಿಧ ಪ್ರಾಣಿಗಳೂ ತೃಪ್ತಿಯನ್ನು ಪಟ್ಟವೆಂದು ಬೇರೆಯಾಗಿ ಹೇಳಬೇಕಾದುದೇನು?

ಆ ಬ್ರಹ್ಮರ್ಷಿಯ ಮುಂದೆ ದೇವರಾಜನು ಕೈ ಮುಗಿದು ನಿಂತಿದ್ದಾನೆ. ದೇವಗುರುವಿನ ಅಪ್ಪಣೆಯಿಂದ ನುಡಿಯುತ್ತಿದ್ದಾನೆ. “ದೇವ, ತಮ್ಮ ಮುಂದೆ ಕ್ಷುದ್ರರೆಂದು ಹೇಳಿಕೊಳ್ಳಲೂ ಆಗದ ಕ್ಷುದ್ರರು ನಾವು. ತಾವು ಈ ಬ್ರಹ್ಮಾಂಡವನ್ನು ತನ್ನೊಳಗಿರುವ ಅವ್ಯಕ್ತಕ್ಕಿಂತಲೂ ಆಚಿನದನ್ನು ಬಲ್ಲವರು. ಈ ಬ್ರಹ್ಮಾಂಡ ನಾಯಕನಾದ ಮಹಾವಿಷ್ಣುವಿನ ಅಪ್ಪಣೆಯೆಂದು ತಮ್ಮ ಸನ್ನಿಧಾನಕ್ಕೆ ಬಂದು ಬೇಡಿಕೊಳ್ಳುತ್ತಿರುವೆವು. ತಮ್ಮ ಮೈಯೆಲ್ಲವೂ ತಪಸ್ಸಿನಿಂದ ವಜ್ರವಾಗಿರುವುದು. ರಕ್ತಮಾಂಸಾದಿ ಸಪ್ತಧಾತುಗಳನ್ನು ತಮ್ಮ ತಪೋಬಲದಿಂದ ವಜ್ರಗಳನ್ನಾಗಿ