ಪುಟ:Mahakhshatriya.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಗಲೆಂದು ಕಾಮಧೇನುವನ್ನು ಕರೆದು ಹೇಳಿದನು. ಕಾಮಧೇನವು “ನನಗೆ ಅದರಿಂದ ಕೆಟ್ಟ ಹೆಸರು ಬರದಿರಲಿ. ನಾನು ಆ ಕಾರ್ಯವನ್ನು ಏಕಾಂತದಲ್ಲಿ ಮಾಡಲು ಅಪ್ಪಣೆಯಾಗಬೇಕು” ಎಂದಳು. ಇಂದ್ರನು ಆಗಲೆಂದನು. ಇಂದ್ರನು ಕಾಮಧೇನುವಿನ ರಕ್ಷಣೆಗೂ, ಆ ಬೆನ್ನುಮೂಳೆಯನ್ನು ತೆಗೆದುಕೊಂಡು ಹೋಗಿ, ವಿಶ್ವಕರ್ಮನಿಗೆ ಕೊಟ್ಟು ಅದನ್ನು ವಿಶೇಷ ಅಯುಧವನ್ನಾಗಿ ಮಾಡಲೂ ತಕ್ಕ ಪರಿವಾರವನ್ನು ಅಲ್ಲಿ ಗೊತ್ತುಮಾಡಿ ತಾನು ತನ್ನವರನ್ನು ಕರೆದುಕೊಂಡು ಬ್ರಹ್ಮರ್ಷಿಯ ಅಪ್ಪಣೆ ಪಡೆದು ಹೊರಟುಹೋದನು.

ದಧೀಚಿಯು ತನ್ನ ಧ್ಯಾನಾನಂದದಲ್ಲಿ ತಾನಿದ್ದಾನೆ. ಆತನ ಆನಂದವು ಘನವಾಗಿ ಜ್ಞಾನಸ್ವರೂಪವಾಗಿ ತಾನೇತಾನಾಗಿದೆ. ಆಗ, ತ್ವಷ್ಟೃವು ಅಲ್ಲಿಗೆ ಬಂದನು. ದಧೀಚಿಯು ನಾಮರೂಪಾತ್ಮಕ ಪ್ರಪಂಚವನ್ನು ಬಿಟ್ಟು ಆನಂದಮಯ ಕೋಶವನ್ನು ದಾಟಿ, ಆರೂಢನಾಗಿ ಸಮುದ್ರನಾಗಿ ಸಮುದ್ರದ ಜಲದಲ್ಲಿ ಬೆರೆತುಹೋಗುವ ನದೀಜಲದಂತೆ ಅಷ್ಟಷ್ಟಾಗಿ ಕರಗುತ್ತಿದ್ದಾನೆ. ಆಕಾಶದಲ್ಲಿ ತುಂಬಿರುವ ಪ್ರಣವದಲ್ಲಿ ತನ್ನ ಜ್ಞಾತೃಭಾವವನ್ನು ಬಿಟ್ಟು ಸ್ವಭಾವರಹಿತವಾದ ಭವದಲ್ಲಿ ಲೀನವಾಗುವ ಪ್ರಯತ್ನದಲ್ಲಿದ್ದಾನೆ. ಒಟ್ಟಿನಲ್ಲಿ ಆತನದು ಬೇಲೀ ಹಾರುವ ಪ್ರಯತ್ನ. ದೇಹತತ್ವವನ್ನು ದಾಟಿದ್ದಾನೆ. ಮನಸ್ಸತ್ವವನ್ನು ದಾಟಿದ್ದಾನೆ. ಬುದ್ಧಿಯಲ್ಲಿರುವ ಅಹಂಕಾರ ತತ್ವದಿಂದ ಪರಾಙ್ಮುಖನಾಗುತ್ತಿದ್ದಾನೆ. ಇನ್ನೂ ಪ್ರತ್ಯಭಿಜ್ಞೆಯು ಅಳಿದಿಲ್ಲ. ಆಗ ತ್ವಷ್ಟೃವು ‘ದಧೀಚಿ’ ಎಂದು ಕೂಗುತ್ತ ಒಳಗೆ ಬಂದನು. ಆತನ ಸನ್ನಿಧಾನವೂ, ಆತನು ನಾಮನಿರ್ದೇಶ ಪೂರ್ವವಾಗಿ ಕೂಗಿದುದೂ ಸೇರಿ, ದಧೀಚಿಯನ್ನು ಹಿಂದಕ್ಕೆ ಕರೆಯಿತು. ಮತ್ತೆ ಜ್ಞಾತೃಭಾವವು ಪ್ರಬಲವಾಯಿತು. ಅಲ್ಲಿಂದ ಶುದ್ಧಾಕಾಶ ಮಂಡಲದಿಂದ ಕ್ರಮಕ್ರಮವಾಗಿ ಪಂಚಭೂತಗಳನ್ನೆಲ್ಲಾ ಪ್ರವೇಶಿಸಿ, ಸಂಘಾತ ರೂಪಕವಾದ ಕ್ಷೇತ್ರವನ್ನು ಪ್ರವೇಶಿಸಿ, ಮತ್ತೆ ಎಚ್ಚರಗೊಂಡು, “ಯಾರು ?” ಎಂದನು. ತ್ವಷ್ಟೃವು ಗೋತ್ರಸೂತ್ರಾತ್ಮಕವಾಗಿ ಪ್ರವರವನ್ನು ಹೇಳಿ ಅಭಿವಂದಿಸಿದನು.

ದಧೀಚಿಯು ಮತ್ತೆ ಮಿತಪ್ರಜ್ಞನಾಗಿ ಪಂಚಭೂತಸಂಘಾತವಾದ ಕ್ಷರ ಪುರುಷನ ಕ್ಷೇತ್ರಕ್ಕೆ ಪ್ರವೇಶಿಸಬೇಕಾಗಿ ಬಂತೆಂದು ಆಶ್ಚರ್ಯಪಡುತ್ತ ಅವೆಲ್ಲವೂ ಮಾಯಾಶಖಲವಾಗಿದ್ದರೂ, ಅಗ್ನಿಸಂಪರ್ಕದಿಂದ ಬಿಸಿಯನ್ನು ಕೆಂಪನ್ನು ಪಡೆದ ಲೋಹಪಿಂಡದಂತೆ, ಚೇತನಚೈತನ್ಯನಾದ ತನ್ನ ಸಂಪರ್ಕದಿಂದ ತಾವೂ ಚೇತನವಾಗಿರುವ ಆಶ್ಚರ್ಯಕರವಾದ ದೃಶ್ಯದಿಂದ ಸಂತೋಷಪಡುತ್ತ ಆತನನ್ನು ಮಾತನಾಡಿಸಿದನು : “ಏನು ತ್ವಷ್ಟೃ ? ಇಲ್ಲಿಯವರೆಗೆ ಬಂದೆಯಲ್ಲ ?” ತ್ವಷ್ಟೃವು ಹೇಳಿದನು “ಇಂದ್ರನಿಲ್ಲಿಗೆ ಬಂದಿದ್ದನಂತೆ ! ನೀನು ಅವನಿಗೆ ವಜ್ರಸಾರವಾದ