ಪುಟ:Mahakhshatriya.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೃತ್ರಾಸುರನು ತಲೆದೂಗುತ್ತ ಹೇಳಿದನು, “ಸರಿ. ಆ ಮುಹೂರ್ತದವರೆಗೂ ಕಾಯೋಣ.”

ಶುಕ್ರನು ಪರಮಸಂಕಟದಿಂದ ಹೇಳಿದನು ; “ನೀನು ಸುಮ್ಮನಿದ್ದರೂ ನಿನ್ನ ಪರಿವಾರದವರು ಸುಮ್ಮನಿರುವರೆ ? ಅದರಲ್ಲೂ ಇಂದ್ರನು ವಜ್ರಾಯುಧವನ್ನು ಸಂಪಾದಿಸಿದನೆಂದ ಮೇಲೆ ಸುಮ್ಮನಿರುವುದೆಂತು ? ಪಿತೃದತ್ತವಾದ ನಿನ್ನ ಶಕ್ತಿಯನ್ನು ವಿವರ್ಧಿಸಬೇಕೆಂದು ನಾನು ಮಾಡುತ್ತಿರುವ ಪ್ರಯತ್ನವನ್ನು ಇಂದು ನಿನ್ನ ಸಂಕಲ್ಪವು ಮುರಿಯಿತು. ಈಗ ನೀನು ವಿದೇಹಿಯಾಗಿ ಪಂಚಭೂತಗಳನ್ನೂ ಅಹಂಕಾರವನ್ನೂ ಹಿಡಿಯಬಲ್ಲವನಾದೆ. ಸದೇಹಿಯಾಗಿ ಅವುಗಳನ್ನು ಹಿಡಿದು ಆಡಿಸಬಲ್ಲವನು ಇಂದ್ರನಾಗುವನು. ಆ ಇಂದ್ರಶಕ್ತಿಯನ್ನು ಧರ್ಮದಿಂದಾಗಲಿ, ತಪಸ್ಸಿನಿಂದಾಗಲಿ ಪಡೆಯಬೇಕು. ಅತೀಂದ್ರನಾಗುವ ಶಕ್ತಿಯನ್ನು ನಿನಗೆ ನಿನ್ನ ಪಿತೃವು ಕೊಟ್ಟರೂ ಇಂದ್ರನಾಗುವ ಶಕ್ತಿಯನ್ನು ಕೊಟ್ಟಿರಲಿಲ್ಲ. ನಾನು ಅದನ್ನು ಸಂಪಾದಿಸುವುದಕ್ಕೆ ಪ್ರಯತ್ನಪಟ್ಟು ಮುಕ್ಕಾಲಿನಷ್ಟು ಗೆದ್ದಿದ್ದೆ. ಇಂದು ನೀನು ಚೈತ್ರಯಾತ್ರೆಗೆ ಸಂಕಲ್ಪಮಾಡಿ, ಆ ಪ್ರಯತ್ನವನ್ನು ಪೂರ್ತಿ ಮಾಡಿಬಿಟ್ಟೆ ಹುಂ, ವಿಧಿಯ ಸಂಕಲ್ಪ.”

ವೃತ್ರನಿಗೂ, ದಾನವೇಂದ್ರನಿಗೂ ಅದನ್ನು ಕೇಳಿ ವ್ಯಥೆಯಾಯಿತು. ವೃತ್ರನು, ಪರಾಕ್ರಮಿಗೆ ತಕ್ಕ ರೀತಿಯಲ್ಲಿ ಮತ್ತೆ ಆಚಾರ್ಯರಲ್ಲಿ ವಿಜ್ಞಾಪಿಸಿದನು. “ದೇವ, ತಮ್ಮ ಮಂತ್ರಶಕ್ತಿಯಿಂದ ಆಗಿರುವುದನ್ನು ನಮ್ಮ ಪರಾಕ್ರಮದಿಂದ ಪೂರ್ಣ ಮಾಡಲು ಸಾಧ್ಯವಿಲ್ಲವೆ ?”

ಶುಕ್ರನು ಪ್ರಯತ್ನವು ವಿಫಲವಾಯಿತೆಂದು ತೋರಿಸುವ ಪೆಚ್ಚುನಗೆಯನ್ನು ನಕ್ಕು ಹೇಳಿದನು : “ವೃತ್ರೇಂದ್ರ, ನಾನೂ ನೀನೂ ಈ ದಾನವೇಂದ್ರರೂ ಎಲ್ಲರೂ ಕಾಲದ ಶಿಶುಗಳು ಎಂಬುದನ್ನು ಗಣಿಸದೆ ಮಾತನಾಡುತ್ತಿರುವೆ. ಕಾಲವು ಯಾವುದು, ಅದರ ಪ್ರಭಾವವೇನು ಬಲ್ಲೆಯಾ ? ತ್ರಿಮೂರ್ತಿಗಳೂ ಕಾಲದ ಶಿಶುಗಳು. ಪ್ರಜಾಪತಿಯು ಈ ಬ್ರಹ್ಮಾಂಡಕ್ಕೆ ಅಧಿಪತಿ. ಆತನನ್ನು ಸಂವತ್ಸರವೆಂದು ಪೂಜಿಸುವುದರ ಅರ್ಥವೇನು ಬಲ್ಲೆಯಾ ? ದೇಹದೇಹದಲ್ಲಿಯೂ ಕುಳಿತು, ಶ್ವಾಸರೂಪನಾಗಿ, ಆಯಾ ಪ್ರಾಣಿಯು ಆಯುರ್ದಾಯವನ್ನು ಅಳೆಯುತ್ತಿರುವ ಕಾಲವನ್ನು ನೀನೆಂತು ಮೀರಬಲ್ಲೆ ? ನಾನು ನಿನಗೆ ಹೇಳಿದ್ದುದು ಪ್ರಾಜಾಪತ್ಯವ್ರತ. ಆ ವ್ರತವನ್ನು ನೀನು ಕಾಲ ಪ್ರಚೋದಿತನಾಗಿ ಪೂರ್ಣ ಮಾಡಿ ನೀನು ಪ್ರಜಾಪತಿಯೇ ಆಗಿದ್ದರೆ, ಆಗ ಇಂದ್ರನನ್ನು ಮೂಲೆಗೊತ್ತುವವನಾಗುತ್ತಿದ್ದೆ. ಆ ವ್ರತವು ಪೂರ್ಣವಾಗಲಿಲ್ಲವಾಗಿ, ಈಗ ನೀನು ಇಂದ್ರನನ್ನು ಗೆದ್ದರೂ, ಸಮಯವನ್ನು ಸಾಧಿಸಿ ಇಂದ್ರನು ನಿನ್ನನ್ನು ಗೆಲ್ಲುವನು. ದಾನವರು ಮತ್ತೆ ಸ್ವರ್ಗವನ್ನು ಬಿಟ್ಟು