ಪುಟ:Mahakhshatriya.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾತಾಳವನ್ನು ಸೇರಬೇಕಾಗುವುದು.

“ಆಗಲಿ ದೇವ, ನೀವು ಮನಸ್ಸು ಮಾಡಿ ನನಗೆ ಇಂದ್ರತ್ವವನ್ನು ಕೊಡಿಸಿರಿ. ಅದನ್ನು ಕಾಪಾಡಿಕೊಳ್ಳುವ ಯೋಚನೆಯನ್ನು ಆಮೇಲೆ ಮಾಡಲು ತಾವು ಇದ್ದೀರಿ.”

“ಅಲ್ಲೇ ದಾನವರು ಎಡುವುತ್ತಿರುವುದು. ಯೋಗಕ್ಷೇಮಗಳೆರಡನ್ನೂ ಒಂದೇ ಕಾಲದಲ್ಲಿ ಸಾಧಿಸಬೇಕು ಅಸುರೇಂದ್ರ. ನೀರನ್ನು ತಡೆಯುವುದೊಮ್ಮೆ ತಡೆದ ನೀರು ನಿಲ್ಲುವಂತೆ ಮಾಡುವುದೊಮ್ಮೆಯಲ್ಲ. ಎರಡೂ ಒಟ್ಟಿಗೇ ನಡೆಯಬೇಕು. ಚಿಗುರೊಮ್ಮೆ ಒಡೆಯಲಿ. ಆಮೇಲೆ ಹೂವು ಬಿಡಲಿ ಎನ್ನುವುದಾಗುವುದಿಲ್ಲ. ಹೂ ಚಿಗುರೊಡನೆಯೇ ಹುಟ್ಟಿಬಂದರೆ, ಆಗ ಫಲವಾಗುವುದು. ಹುಂ, ಇರಲಿ, ಈಗಲೂ ನೀನು ಸಾವಿರಾರು ವರ್ಷ ಕಾಲ ಇಂದ್ರನಾಗಿರುವೆ. ನಾನು ನಿನಗೆ ವರವನ್ನು ಕೊಡುವೆನು. ನೀನು ಇಂದ್ರನಾಗಿರುವವರೆಗೂ ಇಂದ್ರನು ನಿನ್ನನ್ನು ಓಲೈಸುವಂತಾಗಲಿ. ಆಮೇಲೆ ಇಂದ್ರನನ್ನೂ ಹೆದರಿಸಬಲ್ಲ ಶಕ್ತಿವಂತನಾಗು. ಇನ್ನು ನೀನು ಈ ದಿನವೇ ದೇವಲೋಕದ ಮೇಲೆ ದಾಳಿಯಿಡಬಹುದು. ವಿಜಯಧ್ವಜವನ್ನೂ ಪ್ರಸ್ಥಾನಭೇರಿಯನ್ನೂ ಪೂಜೆಮಾಡಿಸು. ದಾನವಾದಿಗಳೆಲ್ಲ ತಮ್ಮ ತಮ್ಮ ಸೇನೆಯೊಡನೆ ಯಥಾಯೋಗ್ಯವಾಗಿ ವ್ಯೂಹಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಚತುರಂಗಸೇನೆಯೊಡನೆ ಬರಲಿ.”

“ತಾವೂ ನಮ್ಮೊಡನೆ ಬರುವಿರಾ”

ದಾನವಸೇನೆಯು ಹೊರಟ ಮೇಲೆ ನನ್ನ ಜಪ ಹೋಮಾದಿಗಳಿಂದ ಪ್ರಯೋಜನವಿಲ್ಲ. ಎಲ್ಲವೂ ಮುಗಿದಂತಾಯಿತು. ಆದರೂ ಕರ್ಮವು ಸಾಫಲ್ಯವಾಗಿ ಮುಗಿಯಲಿ ಎಂಬ ಭ್ರಾಂತಿಯಿಂದ ಅದನ್ನು ಮುಗಿಸಿ ಬರುವೆನು. ದೇವತೆಗಳೂ ನಿಮ್ಮೊಡನೆ ಹಿಂದಿನಂತೆ ಖಡಾಖಡಿಯಾಗಿ ನಿಂತು ಯುದ್ಧ ಮಾಡುವುದಿಲ್ಲ, ಹಾಗೆಂದು ನೀವು ನಿಮ್ಮ ಪೌರುಷವನ್ನು ತೋರಿಸದಿರಬೇಡಿ. ಯುದ್ಧವೆಲ್ಲವೂ ಮುಗಿದು ಅವರು ಅಮರಾವತಿಯನ್ನು ಬಿಟ್ಟೋಡುವ ವೇಳೆಗೆ ನಾನು ಬರುವೆನು.”

ಈ ಮಾತನ್ನು ಕೇಳಿ ದಾನವೇಂದ್ರರೆಲ್ಲರೂ ಬಹು ಸಂತೋಷಪಟ್ಟುಕೊಂಡರು. ಒಬ್ಬೊಬ್ಬರ ಮನಸ್ಸಿನಲ್ಲಿಯೂ “ಹಿಂದೆ ನಾವು ಗೆದ್ದಾಗ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳನ್ನು ಎಲ್ಲಿಯೋ ಮರೆಮಾಡಿದ್ದರು. ಈ ಸಲ ಹಾಗೆ ಮಾಡದಂತೆ ನೋಡಿಕೊಳ್ಳಬೇಕು” ಎಂದೆನಿಸಿತು. ಎಲ್ಲರಿಗೂ ಭೋಗದಾಸೆ, ಭೋಗದ ಹಂಬಲ, ಭೋಗದ ಚಿಂತೆ. ಅಮರಾವತಿಯನ್ನು ಹಿಡಿಯುವುದರಲ್ಲಿ ಇನ್ನೇನೂ ಉದ್ದೇಶವಿಲ್ಲ. ಎಲ್ಲರೂ ತಮ್ಮ ತಮ್ಮ ಆಸೆಗಳನ್ನು