ಪುಟ:Mahakhshatriya.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಆಗಲಿ, ಅದನ್ನೂ ಹೇಳೋಣ, ಆದರೆ ಅದಕ್ಕಿಂತ ಮುಂಚೆ ಸ್ವಪ್ನ ವಿಚಾರವನ್ನು ತಿಳಿದುಕೊಳ್ಳಬೇಕು. ಜೀವನು ತನ್ನ ವಾಸನಾಭಂಡಾರವನ್ನು ಬರಿದುಮಾಡಿಕೊಳ್ಳುವ ಪ್ರಯತ್ನವೇ ಸ್ವಪ್ನವು. ಬಾಹ್ಯೇಂದ್ರಿಯಗಳು ಇಲ್ಲದಿರಲು, ಅಂತರಿಂದ್ರಿಯಗಳು ತಾವೇ ತಾವಾಗಿ ವಾಸನಾಭಂಡಾರವನ್ನು ಬಿಚ್ಚಲು ಅಲ್ಲಿ, ಕಾಲದೇಶಪ್ರಭಾವದಿಂದ ಸ್ವಪ್ನವಾಗುವುದು. ಅದೂ ಜಾಗ್ರತ್ತಿನಂತೆಯೇ ಒಂದು ವೃತ್ತಿಯು ; ಎಂದರೆ ಮನೋವ್ಯಾಪಾರವು. ಸ್ವಪ್ನವು ಜಾಗ್ರತ್ತಿನಲ್ಲಿ ಪ್ರಕಟವಾಗದ, ಪ್ರಕಟವಾಗಲಾರದ, ವಾಸನೆಗಳ ಹೊರಚೆಲ್ಲುವಿಕೆಯು. ಕೆರೆಗೆ ಕೋಡಿ ಇರುವಂತೆ, ಅಂತಃಕರಣದ ಕೋಡಿ ಅದು. ಅಲ್ಲಿ ಹರಿಯುವ ನೀರಿನ ಸ್ವಭಾವದಿಂದ ಕೆರೆಯಲ್ಲಿನ ನೀರಿನ ಸ್ವಭಾವವನ್ನು ಊಹಿಸಿಕೊಳ್ಳುವಂತೆ, ತನ್ನ ತನ್ನ ಸ್ವಪ್ನವನ್ನು ನೋಡಿಕೊಂಡು ಅಂತಃಕರಣದ ಮಾಲಿನ್ಯವನ್ನು ತೊಳೆದುಕೊಳ್ಳಬೇಕು. ಸ್ವಪ್ನವನ್ನು ನೋಡುವ ತನ್ನಿಂದ ಅದು ಭಿನ್ನವೆಂದು ತಿಳಿದುಕೊಳ್ಳುವುದೇ ಅಲ್ಲಿರುವ ಮಾಲಿನ್ಯವು. ಸ್ವಪ್ನವನ್ನು ಕಂಡವನು’ ಈ ಸ್ವಪ್ನವು ತನ್ನಿಂದಲೇ ಸೃಷ್ಟವಾದುದು : ಅದೂ ‘ಅದನ್ನು ಕಾಣುವವನೂ ಬೇರಲ್ಲ’ ಎಂದು ಯಾವತ್ತು ತಿಳಿದುಕೊಳ್ಳುವನೋ ಅದೇ ಅದು ಶುದ್ಧವಾಗುವಿಕೆ. ಮೊದಲು ಇದು ಸ್ವಪ್ನ ಎಂದು ಅರಿವಾಗಿ ಆನಂತರ, ಅದು ಶುದ್ಧವಾದಾಗ, ಜಾಗ್ರತ್ತಿನಲ್ಲಿರುವ ಮುಖ್ಯ ವೃತ್ತಿಯು ಅಲ್ಲಿಯೂ ತಲೆದೋರುವುದು. ಅದು ಸ್ವಪ್ನಜಯವು.”

“ಹಾಗೆಯೇ ನಿದ್ರಾಜಯವನ್ನು ಹೇಳುವೆನು ಕೇಳಿ. ಜಾಗ್ರತ್ಸ್ವಪ್ನಗಳಲ್ಲಿ ಎಡಬಿಡದೆ ನುಡಿಯುತ್ತಿರುವ ಉದಾನವಾಯುವು ಸುಷುಪ್ತಿಕಾಲದಲ್ಲಿ ಸುಮ್ಮನಿರುವುದು. ಆ ಉದಾನವಾಯುವು ಆಗ ಮಂತ್ರ ಜಪಮಾಡುವಂತೆ ಮಾಡುವುದೇ ಸುಷುಪ್ತಿ ಜಯವು. ಸುಷುಪ್ತಿಜಯವಾದವನಿಗೆ ಜಾಗ್ರತ್ಸ್ವಪ್ನಗಳೆರಡರಲ್ಲೂ ಉದಾನವಾಯುವು ಮಂತ್ರಜಪವನ್ನು ಮಾಡುವುದು. ಆಗ ದೃಶ್ಯವೆಲ್ಲವೂ ದಾಳಿಂಬದ ಹಣ್ಣು ಬಿರಿಯುವಂತೆ ಬಿರಿದು ತನ್ನೊಳಗೆ ಹೊರಗೆ ಎಲ್ಲೆಲ್ಲೂ ತುಂಬಿರುವ ಬ್ರಹ್ಮವಸ್ತುವನ್ನು ಪ್ರದರ್ಶಿಸುವುದು. ಆ ಬ್ರಹ್ಮವಸ್ತುವು ತಾನೊಲಿದವರಿಗೆ ಒಲಿಯುವುದಲ್ಲದೆ ಇತರರಿಗೆ ಒಲಿಯುವುದಿಲ್ಲ. ಅದರಿಂದ ಆ ಬ್ರಹ್ಮವಸ್ತುವಿನ ಒಲವನ್ನು ಪಡೆದಾಗ, ಅದು ಒಲಿದಾಗ ಜಾಗ್ರತ್ ಸ್ವಪ್ನ ಸುಷುಪ್ತಿಗಳು ಮೂರೂ ಇಲ್ಲವಾಗಿ, ಇವೊಂದೂ ಅಲ್ಲದ ಇನ್ನೊಂದು ಅವಸ್ಥೆಯು ಬರುವುದು. ಅದನ್ನು ತುರೀಯವೆನ್ನುವರು. ಆ ತುರೀಯವು ಬಂದಾಗ ಈ ದೇಹವು ಒಂದು ದುರ್ಗವಾಗಿ ತನ್ನನ್ನು ಹಿಡಿದುಕೊಂಡಿದೆಯೆಂಬುದು ಗೊತ್ತಾಗುವುದು.