ಪುಟ:Mahakhshatriya.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆತನಿರಲಿ, ಆತನ ಐರಾವತವೂ ಒಂದೆರಡು ಹೆಜ್ಜೆ ಹಿಂದಿಡುತ್ತದೆ. ಎತ್ತಿದ್ದ ಸೊಂಡಿಲನ್ನು ಇಳಿಸಿದೆ. ಕಣ್ಣರಳಿಸಿ, ಭೀತಿಯಿಂದ, ಇದಾವ ಭೂತರಾಜನಿವನು ಎದುರು ಬರುತ್ತಿರುವನು ಎಂದು ಕೇಳುವಂತೆ, ಹೆದರಿಕೆಯಿಂದ ಸಣ್ಣದಾಗಿ ಗೊರಗೊರ ದನಿಮಾಡುತ್ತಿದೆ.

ಇಂದ್ರನು ಮತ್ತೆ ಸ್ವಸ್ಥನಾದನು. “ಜಯವೋ ಅಪಜಯವೋ ! ಅಂತೂ ಯುದ್ಧ ಮಾಡಬೇಕು. ನಾನೇ ಅಂಜಿದರೆ, ಈ ಭೂತದೊಡನೆ ಹೋರಾಡುವವರು ಯಾರು ?” ಎಂದು ತನ್ನ ಹೊಸ ಆಯುಧವಾದ ವಜ್ರವನ್ನು ನೋಡಿಕೊಳ್ಳುತ್ತಾನೆ. ಐರಾವತವು ಹಿಮ್ಮೆಟ್ಟದಂತೆ ಅದನ್ನು ಅಂಕುಶದಿಂದ ತಿವಿದು ಮುಂದಕ್ಕೆ ನೂಕುತ್ತಾನೆ. ಅಷ್ಟರೊಳಗಾಗಿ ವೃತ್ರನು “ಇಂದ್ರನೆಲ್ಲಿ ? ಇಂದ್ರನೆಲ್ಲಿ ?” ಎಂದು ಮುಂದೆ ನುಗ್ಗಿ ಬಂದಿದ್ದಾನೆ. ಅವನ ಅದ್ಭುತಾಕಾರವನ್ನು ಕಂಡು ವಿಸ್ಮಯಪಡುತ್ತ ದಾನವರ ಆಕ್ರಮಣವನ್ನೂ ಲಕ್ಷಿಸದೆ ದೇವಸೇನೆಯು ಅವನ ಕಡೆಯೇ ನೋಡುತ್ತಿದೆ.

ಇಂದ್ರನು “ಇದೋ ನಾನಿಲ್ಲಿದ್ದೇನೆ !” ಎಂದು ಎದುರುಬಿದ್ದನು. ಅನೇಕ ದಾನವೇಂದ್ರರ ಶಿರಸ್ಸುಗಳನ್ನು ನಿರ್ಲಕ್ಷ್ಯವಾಗಿ ಕತ್ತರಿಸಿದ್ದ ಖಡ್ಗವನ್ನು ಪ್ರಯೋಗಿಸಿ ತಾನೇ ಯುದ್ಧವನ್ನು ಆರಂಭಿಸಿದನು. ಆ ಮಹಾಭುಜನು ಪ್ರಯೋಗಿಸಿದ ಆ ಮಹಾಖಡ್ಗವನ್ನು ವೃತ್ರನು ಬರುತ್ತಿದ್ದ ಹಾಗೆಯೇ ಹಿಡಿದು ಅತ್ತ ಎಸೆದು ತನ್ನ ಬರಿಗೈಯಿಂದ ಐರಾವತವನ್ನು ಅಪ್ಪಳಿಸಿದನು. ಆ ಗಜೇಂದ್ರವು ಆ ಪ್ರಹರಣವನ್ನು ತಡೆಯಲಾರದೆ ಘೀಳಿಟ್ಟಿತು. ಕೆಳಕ್ಕೆ ಬಿತ್ತು. ಅದು ಹಪ್ಪಳವಾಯಿತೋ ಎಂದು ದೇವಸೇನೆಯು ಕಳವಳಿಸಿತು. ಇಂದ್ರನೂ ಐರಾವತದೊಡನೆ ಆ ಪ್ರಹರಣವನ್ನು ಸೈರಿಸಲಾರದೆ,, ಬಿದ್ದು ವಿಹ್ವಲನಾದನು, ಮೈಕೈಯೆಲ್ಲ ಮುರಿದುಹೋದಂತಾಗಿದ್ದರೂ, ಮತ್ತೆ ವೃತ್ರನನ್ನು ಹೊಡೆಯಲು ವಜ್ರವನ್ನು ಎತ್ತಿ, ಪುಟಚೆಂಡಿನಂತೆ ನೆಗೆದು ಬಂದನು. ವಜ್ರವನ್ನೆತ್ತಿ ಹೊಡೆಯುವುದರೊಳಗಾಗಿ ವೃತ್ರನು ಅವನನ್ನು ಸಣ್ಣಹುಳುವನ್ನು ಹಿಡಿಯುವ ಬಾಲಕನಂತೆ ಹಿಡಿದು ತನ್ನ ಬಾಯೊಳಗೆ ಹಾಕಿಕೊಂಡನು.

ದೇವತೆಗಳೆಲ್ಲರೂ ಹಾಹಾ ಎಂದರು. ಐರಾವತವು ತನ್ನ ಸ್ವಾಮಿಯ ದುರ್ದೆಶೆಯನ್ನು ತಪ್ಪಿಸಲೆಂದೋ ಎಂಬಂತೆ ರೇಗಿ ತನ್ನ ನಾಲ್ಕು ದಂತಗಳಿಂದಲೂ ವೃತ್ರನನ್ನು ತಿವಿಯಿತು. ಆ ಚೌದಂತದ ಪ್ರಹರಣವನ್ನು ತಪ್ಪಿಸಿಕೊಳ್ಳಲು ವೃತ್ರನು ತಿರುಗಿ ಆವ್ಯಗ್ರಹನಾಗಿರುವಾಗ, ದೇವೇಂದ್ರನು ತನ್ನ ಅನಿಮಾಸಿದ್ಧಿಯಿಂದ ಆ ವೃತ್ರಾಸುರನ ತೆರೆದ ಬಾಯಿಯಿಂದ ಈಚೆಗೆ ಬಂದುಬಿಟ್ಟನು.

ವೃತ್ರಾಸುರನು ಮತ್ತೆ ದೇವೇಂದ್ರನನ್ನು ಒಂದು ಕೈಯಿಂದ ಹಿಡಿದನು.