ವಿಷಯಕ್ಕೆ ಹೋಗು

ಪುಟ:Mahakhshatriya.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ನೊಂದು ಕೈಯಿಂದ ತನ್ನನ್ನು ತಿವಿಯಲು ಬಂದಿದ್ದ ಐರಾವತವನ್ನು ಹಿಡಿದನು. ಇಬ್ಬರನ್ನೂ ಎರಡು ಕೈಗಳಲ್ಲಿ ಹಿಡಿದು ಎಸೆದುಬಿಟ್ಟನು. ಇಬ್ಬರೂ ರಣಾಂಗಣದಿಂದ ಸುಮಾರು ದೂರದಲ್ಲಿ ಬಂದು ಬಿದ್ದರು. “ಇಂದ್ರನೇ ರಣಾಂಗಣದಲ್ಲಿ ಇಲ್ಲದ ಮೇಲೆ ತಾವಿದ್ದು ಮಾಡುವುದೇನು ?” ಎಂದು ದೇವಸೇನೆಯು ಹಿಂತೆಗೆಯಿತು.

ಆ ಬೀಸಿ ಎಸೆಯಲು ಬಿದ್ದ ಪೆಟ್ಟಿಗೆ ಐರಾವತವು ಮೂರ್ಛೆಹೋಯಿತು. ಇಂದ್ರನಿಗೆ ಅರಿವು ಉಳಿಯಲಿಲ್ಲ. ಅಷ್ಟು ಹೊತ್ತಿನ ಮೇಲೆ ಎಚ್ಚರವಾಯಿತು. ಒಂದು ಕಡೆ ಆತನಿಗೆ ಎಲ್ಲೂ ಇಲ್ಲದ ಕೋಪ ಬಂದಿದೆ. ಇನ್ನೊಂದು ಕಡೆ ಎಲ್ಲೂ ಇಲ್ಲದ ಭಯವಾಗುತ್ತಿದೆ. ವೃತ್ರನ ಅಟ್ಟಹಾಸವು, ಓಡುತ್ತಿರುವ ದೇವಸೇನೆಯ ಆಕ್ರಂದನ, ಓಡಿಸಿಕೊಂಡು ಬರುತ್ತಿರುವ ದಾನವೇಂದ್ರರ ಅಟ್ಟಹಾಸ, ಎರಡನ್ನೂ ಮೀರಿ, ದಿಕ್ತಟಗಳನ್ನೆಲ್ಲಾ ಒಡೆಯುವಂತೆ ಬೃಹತ್ತಾಗಿ ಕೇಳಿಸುತ್ತಿದೆ.

ಇಂದ್ರನು ಆದುದಾಗಲಿ ಎಂದು ಹುಲ್ಲುಮುಡಿ ಕಚ್ಚಿ ವಜ್ರವನ್ನು ಪ್ರಯೋಗಿಸಲು ಕೈಎತ್ತಿದನು. ಯಾರೋ ಕಿವಿಯಲ್ಲಿ “ಇದು ಕಾಲವಲ್ಲ ಇಂದ್ರ, ಆ ಆಯುಧರಾಜನಿಗೆ ಅವಮಾನ ಮಾಡದಿರು. ಸಕಾಲದಲ್ಲಿ ಇದೆ ಆಯುಧವು ಅವನಿಗೆ ಮೃತ್ಯುವಾಗುವುದು” ಎಂದರು. ಇಂದ್ರನ ಎತ್ತಿದ ಕೈ ಇಳಿಯಿತು.

ಇಂದ್ರನು ತನಗೆ ಬಂದಿದ್ದ ರೋಷವನ್ನು ಉಪಸಂಹರಿಸಿಕೊಂಡು, ತನಗೆ ಬುದ್ಧಿಯನ್ನು ಹೇಳಿದವರು ದರ್ಶನಕೊಡಬೇಕು ಎಂದು ಪ್ರಾರ್ಥಿಸಿದನು. ಎದುರಿಗೆ ಮಂದಸ್ಮಿತ ಸುಂದರವದನಾರವಿಂದದಿಂದ ಪ್ರಕಾಶಿಸುತ್ತಿರುವ ಒಂದು ತೇಜೋರಾಶಿಯು ಆವಿರ್ಭವಿಸಿತು. ಪ್ರಸನ್ನವಾದರೂ ಕಣ್ಣು ಕುಕ್ಕುತ್ತಿರುವ ಆ ತೇಜೋರಾಶಿಯನ್ನು ಕಂಡು, ಸ್ಥಿತಿಕಾರಣನಾದ ನಾರಾಯಣನೇ ಆತನೆಂದರಿತು, ಇಂದ್ರನು ನಮಸ್ಕಾರಾದಿಗಳಿಂದ ಆತನನ್ನು ಅರ್ಚಿಸಿ “ಹಾಗಾದರೆ ಈಗ ನಾನು ಸುಮ್ಮನಾಗಬೇಕೆ ?” ಎಂದು ಕೇಳಿಕೊಳ್ಳುತ್ತಾನೆ.

ಆ ತೇಜೋರಾಶಿಯು ಸಮಾಧಾನದಿಂದ “ಅಮಾವಾಸ್ಯೆಯ ದಿನ ಸೂರ್ಯನಲ್ಲಿ ಸೇರಿಹೋಗುವ ಚಂದ್ರನಂತೆ, ಈಗ ನೀನು ಅವನನ್ನು ಆಶ್ರಯಿಸು. ಸೋತೆನೆಂದು ಒಪ್ಪಿಕೊಂಡು, ನಿನ್ನಂತಹ ಪರಾಕ್ರಮಶಾಲಿಯನ್ನು ನೋಡಿರಲಿಲ್ಲವೆಂದು ಆತನಿಗೆ ಇಂದ್ರ ಪದವಿಯನ್ನು ಬಿಟ್ಟುಕೊಟ್ಟು ಆತನ ಸ್ನೇಹವನ್ನು ಸಂಪಾದಿಸು, ಸಕಾಲದಲ್ಲಿ ಮತ್ತೆ ನಾನು ನಿನಗೆ ಎಚ್ಚರಿಕೆ ಕೊಡುವೆನು. ಆಗ ಅವನನ್ನು ಮುಗಿಸುವೆಯಂತೆ !” ಎಂದು ಹೇಳಿ ಅಂತರ್ಧಾನವಾಯಿತು.

ಇಂದ್ರನು ತನ್ನ ಸಮರವೇಷವನ್ನು ತೆಗೆದು ಹಾಕಿ, ಹೋಗಿ ವೃತ್ರಾಸುರನನ್ನು ಕಂಡನು. ಆ ವೇಳೆಗೆ ಅಮರಾವತಿಯು ದಾನವರ ವಶವಾಗಿದೆ. ವೃತ್ರನು