ಅಮರಾವತಿಯ ಕೋಟೆಯ ಆಚೆ, ಉದ್ಯಾನದಿಂದ ಅತ್ತಲಾಗಿ ಕಟ್ಟಿರುವ ಭವ್ಯಮಂದಿರದಲ್ಲಿ ಶುಕ್ರಾಚಾರ್ಯನು ತನ್ನ ಏಕಾಂತಗೃಹದಲ್ಲಿ ಕುಳಿತು ಯೋಚಿಸುತ್ತಿದ್ದಾನೆ. “ಇದೇನು ? ಈಚೀಚೆಗೆ ವೃತ್ರೇಂದ್ರನ ವಿಚಾರವಾಗಿ ಕೆಟ್ಟಕೆಟ್ಟ ಯೋಚನೆಗಳೇ ಬರುತ್ತಿವೆ ? ಏನೋ ಸರ್ವನಾಶವಾಗಿಹೋಗಿರುವಂತೆ, ಮನಸ್ಸು ಬೇಡಬೇಡವೆಂದರೂ ಅಸುರೇಂದ್ರನ ವಿಪತ್ತನ್ನೇ ಕುರಿತು ಚಿಂತಿಸುತ್ತಿರುತ್ತದೆ. ಭವಿತವ್ಯವನ್ನು ಕುರಿತು ಚಿಂತಿಸಿದರೆ ಅದೇನೋ ಎಲ್ಲವೂ ಶೂನ್ಯವಾಗಿ ಕಾಣುತ್ತದೆ. ಶಚೀಪತಿಯೇನಾದರೂ ಒಳಸಂಚುಮಾಡಿರುವನೋ? ಅವನು ದಿನವೂ ಬೃಹಸ್ಪತಿಗೆಂತೋ ನನಗೂ ಅಂತೆಯೇ ಬಂದು ನಮಸ್ಕಾರ ಮಾಡುತ್ತಿರುತ್ತಾನೆ. ಆಗೇನಾದರೂ ಯಾವಾಗಲಾದರೂ ನಿನಗೆ ರಾಜ್ಯಪ್ರಾಪ್ತಿಯಾಗಲೆಂದು ಆಶೀರ್ವಾದ ಮಾಡಿದೆನೋ? ನನಗೆ ಈ ಸುರಾಪಾನದಿಂದ ಆಗಿರುವ ಅನರ್ಥವು ಅಷ್ಟಿಷ್ಟಲ್ಲ. ನಾನು ಏನೋ ಮಾಡಬೇಕು ಎಂದುಕೊಂಡಿರುತ್ತೇನೆ. ಈ ಸುರಾಪಾನವು ಇನ್ನೇನನ್ನೋ ಮಾಡಿಸುತ್ತದೆ. ಇದನ್ನು ಬಿಡಬೇಕು ಎಂದು ಎಷ್ಟೋ ಸಲ ಮನಸ್ಸು ಮಾಡಿದ್ದೇನೆ. ಆದರೆ, ಬಿಟ್ಟಿಲ್ಲ ಅಲ್ಲದೆ ನಿಜವಾಗಿಯೂ ನೋಡಿದರೆ, ಇದರಿಂದ ನನಗೆ ಎಷ್ಟು ಆನಂದವಿದೆ? ಸುಖದುಃಖಗಳೆರಡನ್ನೂ ಮೀರಿದ ಬ್ರಹ್ಮಾನಂದವುಂಟು. ಆದರೆ ಅಲ್ಲಿ ಮನಸ್ಸಿನ ರಾಗದ್ವೇಷಗಳಿಲ್ಲ. ಮನಸ್ಸೇ ಅಸ್ತವಾಗುವ ಆ ಸ್ಥಿತಿಯನ್ನು ಪಡೆದು, ಇಲ್ಲಿ ಅಸುರಗುರುವಾಗಿರುವುದೆಂತು? ಆಗ ದೇವತೆಗಳಾದರೇನು? ದಾನವರಾದರೇನು? ದೇವರಾಜಾಯ ಸ್ವಸ್ತಿ ದಾನವೇಂದ್ರಾಯ ಸ್ವಸ್ತಿ ಅಷ್ಟೇ! ಆಗಾಗ, ನಿದ್ದೆಗೆ ಸಂದು ದೇಹಕ್ಕೆ ಶಕ್ತಿಯನ್ನು ತಂದುಕೊಳ್ಳುವಂತೆ, ನಿರ್ಗುಣಕ್ಕೆ ಹೋಗಿ ಬೇಕಾದ ಶಕ್ತಿಯನ್ನು ತುಂಬಿಕೊಳ್ಳುವುದಕ್ಕೆ ನಿರ್ಗುಣೋಪಾಸನೆಯನ್ನು ಉಪಯೋಗಿಸಿಕೊಳ್ಳಬೇಕೇ ಹೊರತು, ದಿನದಿನದ ನಿತ್ಯಕರ್ಮಕಲಾಪಗಳಿಗೆಲ್ಲಾ ಸುರಾ ! ಸುರಾ ! ಸುರಾ ! ಅದರಿಂದಲೇ ಏನೋ? ಹೀಗೆ ತಗ್ಗಿದ ಹೃದಯವನ್ನು ಉಬ್ಬಿಸಲೆಂದೋ ಏನೋ ಈ ಸುರೆಯ ಸೃಷ್ಟಿಯಾದುದು! ಈ ಸುರೆಯನ್ನು ಬಿಡುವುದೇ? ಎಂತಹ ಅವಿವೇಕ! ಸುಗಂಧದ್ರವ್ಯದಿಂದ ಸುವಾಸಿತವಾಗಿ, ಭೂತ ಭವಿಷ್ಯತ್ತುಗಳೆಂಬುದನ್ನೆಲ್ಲಾ ಮರೆಸಿ,