ಪುಟ:Mahakhshatriya.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರ್ತಮಾನಕ್ಷಣವೊಂದನ್ನೇ ಮಹತ್ತರವಾಗಿ ಮಾಡುವ ಈ ಸುರೆಯ ಮುಂದೆ ಇನ್ನುಂಟೆ ?’ ಎಂದು ಯೋಚಿಸುತ್ತಾ ಆಳನ್ನು ಕರೆದು “ನಮಗಷ್ಟು ಪಾನವು ಬೇಕೆಂದು ಹೇಳು” ಎಂದನು. ವೃತ್ರನಿಗಾಗಿ ಮಾಡುತ್ತಿದ್ದ ಚಿಂತೆಯೆಲ್ಲವೂ ಪಾನದಲ್ಲಿ ಮುಳುಗಿಹೋಯಿತು. ಆಚಾರ್ಯನು ಅಂದು ವೃತ್ರನಿಗೆ ಇಂದ್ರತ್ವವು ಶಾಶ್ವತವಾಗಬೇಕಾದರೆ ಏನು ಮಾಡಬೇಕು ಎಂದು ಯೋಚಿಸಲು ಕುಳಿತಿದ್ದು. ಅದು ಮುಗಿದದ್ದು ಪಾನದಲ್ಲಿ.

ದಿನವೂ ಹೀಗೇ ಆಗುವುದು. ಆದರೂ ಅದೇನೋ ಶುಕ್ರಾಚಾರ್ಯನ ಮನಸ್ಸಿಗೆ ಬರಲೊಲ್ಲದು. ಈ ವಿಶ್ವವನ್ನೆಲ್ಲಾ ಆಡಿಸುವ ಶಕ್ತಿಯೊಂದಿದೆ. ಅದನ್ನು ಆರಾಧಿಸಬೇಕೆಂದು.

ಇತ್ತ ಅಮರಾವತಿಯಲ್ಲಿ ಆಚಾರ್ಯಮಂದಿರದಲ್ಲಿ ದೇವಗುರುವು ಕುಳಿತು ಯೋಚಿಸುತ್ತಿದ್ದಾನೆ “ಆಹಾ. ಆ ನಾರಾಯಣನ ದಯೆಯೆನ್ನುವುದು ಎಷ್ಟು ದೊಡ್ಡದು! ಆತನ ಕೃಪೆಯಿಂದ, ನಮಗೆ ಅವಮಾನಗಳಾಗಿಲ್ಲ. ಇಂದ್ರನಿಗೆ ಇಂದ್ರತ್ವ ಹೋಯಿತು! ಅಧಿಕಾರವು ತಪ್ಪಿಹೋಯಿತು. ಅದರೂ, ಆ ಮಹಾವಿಷ್ಣುವಿನ ಅನುಗ್ರಹದಿಂದ ನಾವು ನಾವು ಇನ್ನೂ ನಮ್ಮ ನಮ್ಮ ಮನೆಗಳಲ್ಲಿ ಇರುವೆವು. ಬಾಗಿಲಲ್ಲಿ ಕಾವಲಿದ್ದ ದೇವಪುರುಷರಿಗೆ ಪ್ರತಿಯಾಗಿ ದಾನವರು ಕಾವಲಿರುವರು. ನಾವು ಮತ್ತೆ ಸಭೆ ಸೇರುವಂತಿಲ್ಲ ಗೋಪ್ಯವಾಗಿ ವಿಚಾರ ವಿನಿಮಯ ಮಾಡುವಂತಿಲ್ಲ ಅದಷ್ಟು ಬಿಟ್ಟು ವೃತ್ರೇಂದ್ರನು ನಮ್ಮನ್ನು ಯಾವ ರೀತಿಯಲ್ಲೂ ಗೋಳುಗುಟ್ಟಿಸುತ್ತಿಲ್ಲ. ಆದರೆ, ಇದೇ ಸರಿಯೆಂದು ಇರಲಾದೀತೆ? ಕಡಿದ ಮರವು ಚಿಗುರುವುದು. ಕದಡಿದ ನೀರು ತಿಳಿಯಾಗುವುದು. ಹಾಗೆಯೆ, ಒಂದು ಸಹಜಸ್ಥಿತಿಯಿದೆಯಲ್ಲ ಅದು ಬರಬೇಡವೆ? ಬೆಂಕಿಯು ತನ್ನ ಆಹಾರವನ್ನೆಲ್ಲಾ ಮುಗಿಸುವಂತೆ, ದೇವತೆಯಲ್ಲದ ಇನ್ನು ಯಾರೇ ಆಗಲಿ, ಈ ಸ್ವರ್ಗಭೂಮಿಗೆ ಬಂದರೆ ತನ್ನ ಪುಣ್ಯವನ್ನೆಲ್ಲಾ ಸೂರೆಗೊಟ್ಟೇ ತೀರಬೇಕಲ್ಲವೆ? ಈ ವೃತ್ರನೂ ಸಹ ಈ ನಿಯಮದಂತೆ ಎಂದಾದರೊಂದು ದಿನ ತನ್ನ ಪುಣ್ಯವನ್ನೆಲ್ಲ ಮುಗಿಸಿಕೊಂಡು ತನ್ನ ವಸ್ತ್ರವನ್ನು ಝಾಡಿಸಿಕೊಂಡು ಹೊರಟುಬಿಡಬೇಡವೆ? ಅಥವಾ ಶುಕ್ರನೇನಾದರೂ ವೃತ್ರನಿಗೆ ಇಂದ್ರಪದವಿಯು ಈ ಮನ್ವಂತರದ ಕೊನೆಯವರೆಗೂ ಇರುವಂತೆ ಮಾಡಿರುವನೋ? ಹಾಗಾದರೆ ಅದು ಅಖಂಡವಾಗಿರುವಂತೆ ಮಾಡಿರಬೇಕು. ಇಲ್ಲ ಹಾಗಾಗಿಲ್ಲ ಹಾಗೆ ಆಗಬೇಕಾದರೆ ವೃತ್ರನು ಶಚೀಪತಿಯೂ ಆಗಬೇಕಾಗಿತ್ತು. ವೃತ್ರನು ಶಚಿಯನ್ನು ಪಡೆಯಲೂ ಯತ್ನಿಸಿಲ್ಲ. ಆದುದರಿಂದ, ಶುಕ್ರನು ಆ ಗುಟ್ಟನ್ನು ಭೇದಿಸಿಲ್ಲ. ಶಚಿಯನ್ನು ಪಡೆಯದೆ ಯಾವನೇ ಆಗಲಿ, ಇಂದ್ರತ್ವವನ್ನು