ಪುಟ:Mahakhshatriya.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪರಿಪೂರ್ಣವಾಗಿ ಅನುಭವಿಸುವುದೆಂತು. ಆದುದರಿಂದ, ಈ ವೃತ್ರನ ಪುಣ್ಯವು ಮುಗಿಯುತ್ತಾ ಬಂದಿರಬೇಕು. ಆಗಲಿ, ನಾವು ಏಕೆ ಅದನ್ನು ನೋಡಬಾರದು ? ಏಕಾಂತವಾಗಿ ನೋಡಬೇಕು, ನೋಡೋಣ ಎಂದು, ಪ್ರಹರಿಯನ್ನು ಕರೆದು ``ಯಾರಾದರೂ ಬಂದು ಕೇಳಿದರೆ, ನಾವು ಧ್ಯಾನದಲ್ಲಿರುವೆವು ಎಂದು ಹೇಳು. ಬಲವಂತವಾಗಿ ನೋಡಲೇಬೇಕಾಗಿ ಬಂದರೆ, ಬಾಗಿಲಲ್ಲಿ ಕಟ್ಟಿರುವ ಈ ಗಂಟೆಯನ್ನು ಮೃದುವಾಗಿ ಮೂರು ಸಲ ಬಾರಿಸು. ಆದರೆ ನಾವಾಗಿ ಹೊರಗೆ ಬರುವವರೆಗೆ ಬಾರಿಸದಿರುವುದು ಒಳ್ಳೆಯದು. ತಿಳಿಯಿತೆ ?” ಎಂದು ಅವನಿಗೆ ತಿಳಿಯಹೇಳಿ ತಾನು ಧ್ಯಾನಾಸಕ್ತನಾದನು.

ಧ್ಯಾನವು ಬಲಿಯಿತು. ಬಲಿತ ಧ್ಯಾನವು ಸುರಾಚಾರ್ಯನನ್ನು ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋಯಿತು. ಬ್ರಹ್ಮನು ಗೌರವದಿಂದ, ವಿಶ್ವಾಸದಿಂದ ಆಚಾರ್ಯನನ್ನು ಬರಮಾಡಿಕೊಂಡನು. ಬಂದ ಕಾರ್ಯವೇನೆಂದು ಕೇಳಿದನು. ಆಚಾರ್ಯನು “ಚತುರ್ಮುಖನಿಗೆ ನಮಸ್ಕಾರವು ವಾಣೀಪತಿಗೆ ನಮಸ್ಕಾರವು. ಇಂದ್ರನು ಇಂದ್ರತ್ವವನ್ನು ಬಿಟ್ಟು ಅನಿಂದ್ರನಾಗಿರಬೇಕಾದ ಕಾಲವು ಇನ್ನು ಎಷ್ಟು ಇರುವುದು ? ವೃತ್ರನು ಇನ್ನೆಷ್ಟುಕಾಲ ಈ ಇಂದ್ರತ್ವವನ್ನು ಅನುಭವಿಸುವನು ? ಎಂದು ಯೋಚನೆಯಾಯಿತು. ಅದಕ್ಕಾಗಿ ಸನ್ನಿಧಾನದಲ್ಲಿ ಈ ವಿಷಯವನ್ನು ತಿಳಿದುಕೊಂಡು ಹೋಗಬೇಕೆಂದು ಬಂದೆ ? ಎಂದನು.

ಚತುರ್ಮುಖನು ನಗುತ್ತಾ “ನೀವು ದೇವತೆಗಳು, ನಿಮಗೆ ತಿಳಿಯದೆ ನಾವು ಯಾವ ಕೆಲಸವನ್ನು ತಾನೇ ಮಾಡಲಾಗುತ್ತದೆ ? ಅದಕ್ಕಾಗಿಯೇ, ನಿನ್ನನ್ನು ಇಲ್ಲಿಗೆ ಕರೆಸಿಕೊಳ್ಳುವುದಕ್ಕಾಗಿಯೇ, ನಾವು ಈ ಯೋಚನೆಯನ್ನು ನಿನಗೆ ಕಳುಹಿಸಿದೆವು. ಇಂಧ್ರನು ಮತ್ತೆ ಇಂದ್ರತ್ವವನ್ನು ಪಡೆದರೂ, ಇನ್ನೂ ಒಮ್ಮೆ ಅನಿಂದ್ರನಾಗಿರಬೇಕಾಗಿರುವುದು. ವರ್ಷಾಕಾಲದಲ್ಲಿ ಆದ ಸೂರ್ಯದರ್ಶನದಂತೆ ಅದು. ಅದನ್ನು ನೀನೇ ನೋಡುವೆ. ಆಗ, ಎಂದರೆ ಇಂದ್ರನು ಮತ್ತೆ ತಲೆತಪ್ಪಿಸಿಕೊಂಡಾಗ, ನೀನು ಬಹಳ ಕಾರ್ಯ ಮಾಡಬೇಕಾಗುವುದು. ಅದಿರಲಿ ಎರಡನೆಯ ಪ್ರಶ್ನಕ್ಕೆ ಉತ್ತರವಿದು. ವೃತ್ರನ ಕಾಲವು ಮುಗಿಯಿತು. ವೃತ್ರನು ಸಿಂಹಾಸನವನ್ನು ಬಿಡುವನು. ಆದರೂ ವೃತ್ರನಿಗ್ರಹವು ಅಷ್ಟು ಸುಲಭವಲ್ಲ ಆದುದರಿಂದ ನಿಮ್ಮ ಇಂದ್ರನು ಮೈಯೆಲ್ಲ ಕಣ್ಣಾಗಿ ವರ್ತಿಸಬೇಕು. ಕೊನೆಗೆ ನಿನ್ನ ಆಗ್ರಹದಿಂದ ಆಗಿರುವ ಆ ಅನರ್ಥವನ್ನೆಲ್ಲ ನೀನೇ ಸರಿಗಟ್ಟಬೇಕು. ಎಚ್ಚರವಿರಲಿ, ಕೊಂಚ ಅಂಕೆ ತಪ್ಪಿದರೂ ಅನರ್ಥವಾಗುವುದು. ಶ್ರೀ ಮಹಾವಿಷ್ಣುವು, ಎಲ್ಲೆಲ್ಲೂ ತುಂಬಿರುವ ವಿಷ್ಣುವು, ಸಕಾಲದಲ್ಲಿ ಪ್ರೇರಣೆ ಮಾಡಿ ವೃತ್ರವಧವನ್ನು ಮಾಡಿಸುವನು”