ಪುಟ:Mahakhshatriya.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತುಂಬಿ ಎಲ್ಲಾ ವಿಶ್ವವನ್ನೂ ಆಡಿಸುವ ಶ್ರೀಮನ್ನಾರಾಯಣನ ದಯೆಯಿಂದ ಇದು ನಿಜವಾಗಲಿ ಎಂದು ಮನಸ್ಸಿನಲ್ಲಿಯೇ ಮಹಾವಿಷ್ಣುವಿಗೆ ಪೂಜೆಮಾಡಿ ಕುಳಿತನು. ಬಲಗಣ್ಣೂ ಬಲಭುಜವೂ ಶುಭವಾಗಿ ಅದುರಿತು. ಅಡಗಿದ್ದ ಉತ್ಸಾಹವು ತಾನೇ ತಾನಾಯಿತು. ಮರೆಯಲ್ಲಿದ್ದ ಆಯುಧಗಳೆಲ್ಲ ಮನಸ್ಸಿಗೆ ಗೋಚರವಾಗಿ ತಾವು ಸಿದ್ಧವಾಗಿರುವುದನ್ನು ತೋರಿಸಿಕೊಂಡವು. ಇಂದ್ರನಿಗೆ ಏನು ಮಾಡುವುದು ಎಂಬುದು ಯೋಚನೆಯಾಗಿ ಮಹಾವಿಷ್ಣುವಿನ ಪ್ರೇರಣೆ ಏನಾಗುವುದೋ ಎಂದು ಮೈಯೆಲ್ಲಾ ಕಣ್ಣಾಗಿ ಕುಳಿತನು.

ದಾನವೇಂದ್ರರೂ ವೃತ್ರಾಸುರನು ಹೇಳಿದುದನ್ನು ಕೇಳಿದರು. ಆದರೂ ಅದನ್ನು ಯಾರು ಅಷ್ಟಾಗಿ ಗಮನಿಸಲಿಲ್ಲ. “ಇನ್ನು ನಾನು ಅತೀಂದ್ರನಾಗುವೆನು” ಎಂದು ವೃತ್ರನು ಹೇಳಿದುದನ್ನು ಕೇಳಿ, ಅವರು ಅತೀಂದ್ರಸಿಂಹಾಸನಕ್ಕೆ ಅಪ್ಪಣೆ ಮಾಡಿದುದನ್ನು ಕೇಳಿ ಅವರಿಗೆ ಸಂತೋಷವಾಯಿತು. “ಇಂದ್ರ-ಅತೀಂದ್ರ ! ಅದು ಸರಿ, ಅದೇ ಉಚ್ಛ್ರಾಯದ ಗುರುತು” ಎಂದು ಅವರೆಲ್ಲ ಸಂತೋಷಪಟ್ಟು ಪಾನದ ವೈಭವದ ವಿವಶರಾಗಿ ಎಲ್ಲಿಯವರು ಅಲ್ಲಿಯೇ ಒರಗಿದರು.

ಇಂದ್ರನೊಬ್ಬನೇ ಎಚ್ಚರನಾಗಿರುವವನು. ಮಿಕ್ಕವರೆಲ್ಲರೂ ಮೈ ಮರೆತಿದ್ದಾರೆ. ಆಯುಧಗಳೆಲ್ಲವೂ ತೇಜಸ್ವಿಗಳಾಗಿ ಬಂದು ಎದುರು ನಿಂತಿವೆ. ಆದರೆ, ಮಹಾ ವಿಷ್ಣುವಿನ ಅಪ್ಪಣೆಯಿನ್ನೂ ಬಂದಿಲ್ಲ. “ಸಪರಿವಾರನಾದ ವೃತ್ರನನ್ನು ಈಗ ತುಂಡು ತುಂಡು ಮಾಡಲು ಅವಕಾಶವು ಲಭಿಸಿದೆ. ಆದರೆ ಜಗತ್ಪಾಲಕನಾದ ಮಹಾವಿಷ್ಣುವಿನ ಅಪ್ಪಣೆಯಿಲ್ಲದೆ, ಆ ಕಾರ್ಯವನ್ನು ಮಾಡುವುದು ಹೇಗೆ? ಅಪ್ಪಣೆಯಿಲ್ಲದೆ ವಿಶ್ವರೂಪಾಚಾರ್ಯನನ್ನು ವಧಿಸಿದುದಕ್ಕೆ ಈ ಕೃತ್ಯದ ವಶದಲ್ಲಿ ಇಷ್ಟು ದಿನ ತೊಳಲಬೇಕಾಯಿತು. ಈಗ ಇದನ್ನು ವಧಿಸಿದರೆ ಇನ್ನು ಯಾವ ರೂಪದ ಕಷ್ಟವನ್ನು ಅನುಭವಿಸಬೇಕಾದೀತೋ? ಅದರಿಂದ ಎಲ್ಲರ ಹೃದಯದಲ್ಲೂ ನಿಂತು ಎಲ್ಲವನ್ನೂ ಪ್ರೇರಿಸುವ ಆತನ ಆಜ್ಞೆಯು ದೊರಕಲಿ, ಅಥವಾ ಯಾವ ಆಯುಧಕ್ಕೂ ಸಗ್ಗದ ಭೂತವಿದು. ಹಗಲಲ್ಲಿ ಇದು ಸಾಯುವುದಿಲ್ಲ; ರಾತ್ರಿಯಲ್ಲೂ ಸಾಯುವುದಿಲ್ಲ. ಹೀಗೆ ಆಯುಧಕ್ಕತೀತವಾಗಿ, ಕಾಲಕ್ಕತೀತವಾಗಿರುವ ಈ ಭೂತವನ್ನು ಕೊಲ್ಲುವುದಾದರೂ ಎಂತು ? ಅಲ್ಲದೆ ಕಾರ್ಯವನ್ನು ಆರಂಭಿಸಿದರೆ, ಅದು ಪೂರ್ಣವಾಗಬೇಕು. ಅದಿಲ್ಲದ ಅರೆಗಾಯ ಮಾಡಿ ಕೊಲ್ಲದೆ ಬಿಟ್ಟ ಬೇಟೆಯೇ ಬೇಟೆಗಾರನ ಮೇಲೆ ಬೀಳುವುದೆಂದ ಮೇಲೆ, ಈ ಭೂತಕ್ಕೆ ಅರೆಗಾಯ ಮಾಡಿಬಿಟ್ಟರೆ ಇದು ನನ್ನನ್ನು ಬಿಡುವುದುಂಟೆ?

“ಆಯಿತು. ದೇವಕಾರ್ಯಾರ್ಥವಾಗಿ ಈ ಕೆಲಸ ಮಾಡುವೆನಲ್ಲವೆ? ಆದರೆ