ಪುಟ:Mahakhshatriya.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಾಲ ಪಕ್ವವಾಗಿಲ್ಲ. ಇದು ಹಗಲು, ಈ ಭೂತವನ್ನು ಸಾಯಿಸುವ ಆಯುಧವು ತಾನೇ ಯಾವುದು ನನ್ನಲ್ಲುಂಟು ? ಅದರಿಂದ ದೇವಕಾರ್ಯವೇ ಆದರೂ ದೇವಸಂರಕ್ಷಕನಾದ ಮಹಾವಿಷ್ಣುವಿಗೆ ಈ ಕೆಲಸವನ್ನು ಒಪ್ಪಿಸಿ, ಆತನ ಆಜ್ಞೆಯನ್ನು ಎದುರು ನೋಡುತ್ತಿರುವೆನು.”

ಅಂತೂ, ಭೂತಕ್ಕೆ ಕೊನೆಯ ಕಾಲ ಬಂದಿರಬೇಕು. ‘ನಾಳಿನಿಂದ ನೀನು ಇಂದ್ರ’ ಎಂದು ಮೂರು ಸಲ ಹೇಳಿದೆ. ಅದರಿಂದ, ಇಂದೇ ಇದರ ವಧವಾಗಬೇಕು. ಕಾಲವು ಯಾವುದು, ಆಯುಧವು ಯಾವುದು ಎಂಬುದನ್ನು ಮಹಾವಿಷ್ಣುವು ನಿರ್ಧರಿಸಲಿ. ಎಷ್ಟೇ ಆಗಲಿ ನಾನು ಹೊಡೆಯುವುದಕ್ಕೆ. ಹೊಡೆಸುವವನು ಮಹಾವಿಷ್ಣು !” ಎಂದು ಇಂದ್ರನು ಕೈಮುಗಿದನು.

ಇಂದ್ರನು ಆ ಮಾತನ್ನಾಡುತ್ತಿದ್ದ ಹಾಗೆಯೇ ವೃತ್ರನು ಕನವರಿಸಿಕೊಂಡನು. “ಸರಿ, ಇಂದ್ರ, ಭಲೇ ! ನಿನ್ನ ಮಾತು ಸರಿ” ; ಇಂದ್ರನು ಮೈಯೆಲ್ಲ ಕಣ್ಣಾಗಿ ವೃತ್ರನಿಂದ ಆ ಮಾತು ಆಡಿಸಿದವರು ಯಾರು ಎಂದು ನೋಡಿದನು. ಇನ್ನು ಯಾರು ! ಮಹಾವಿಷ್ಣು. ಸರಿ, ಎಂದು ಮಾನಸೋಪಚಾರ ಪೂಜೆ ಮಾಡಿ ಶಚೀಪತಿಯು ಇನ್ನೂ ಎಚ್ಚರವಾಗಿ ಕುಳಿತನು.

* * * *