ಪುಟ:Mahakhshatriya.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈ ತೋಳುಗಳ ತೀಟೆ ತೀರಲಿ.”

“ಆಗಲಿ, ನೋಡೋಣ”

“ನನಗೆ ಬೇಕಾದುದು ಈಗ. ನೀನು ಏನೋ ಸಾವಧಾನವಾಗಿ ‘ಆಗಲಿ, ನೋಡೋಣ’ ಎನ್ನುತ್ತೀಯೆ.”

ಈ ವೇಳೆಗೆ ಸಂಜೆಯಾಯಿತು. ವೃತ್ರನು ಹೇಳಿದನು ; “ಇಂದ್ರ, ನೋಡು ಸೂರ್ಯನು ಪಶ್ಚಿಮದಲ್ಲಿ ಮುಳುಗುತ್ತಿದ್ದಾನೆ. ಸಂಜೆಯಾಗುತ್ತಿದೆ. ಈಗ ನನಗೆಷ್ಟು ಬಲ ಬಲ್ಲೆಯಾ ? ಬೇಕಾದರೆ, ಸಮುದ್ರವನ್ನೆಲ್ಲ ಅಂಗೈಯಲ್ಲಿ ಹಿಂದಕ್ಕೆ ತಳ್ಳಿಬಿಡುತ್ತೇನೆ. ನೋಡುವೆಯಾ ನನ್ನ ಪೌರುಷವನ್ನು ?”

“ಹೌದು, ನೀನಂತಹ ಬಲಶಾಲಿಯೆಂದೇ ನಾನು ನಿನ್ನ ಮೇಲೆ ಯುದ್ಧ ಮಾಡಲು ಹಿಂತೆಗೆದುದು.”

“ನೀನು ಯುದ್ಧ ಮಾಡುವುದಾದರೆ, ಅದನ್ನೆಲ್ಲ ಅತ್ತಿಡುವೆನು, ಆಯಿತು. ನಾನು ಎಷ್ಟು ಹೇಳಿದರೂ ನೀನೊಪ್ಪÅವುದಿಲ್ಲ. ಅದಿರಲಿ. ಹೋಗಲಿ, ಇಲ್ಲಿ ಬಂಡೆಗಳಂತೆ ತೇಲಿಬರುತ್ತಿರುವ ಈ ನೊರೆಯನ್ನು ನೋಡು. ಇದರಿಂದ ಹೊಡೆದು ಯಾರನ್ನಾದರೂ ಕೊಲ್ಲಲಾದೀತೆ ?”

“ನಿನ್ನಂತಹ ಪರಾಕ್ರಮಿಗೆ ಯಾವುದು ತಾನೇ ಸಾಧ್ಯವಿಲ್ಲ ? ಹೊಡೆಯಲು ಸಾಧನವಲ್ಲ ಮುಖ್ಯ. ಹೊಡೆಯುವ ಕೈ ಎಷ್ಟು ಬಲವನ್ನು ಆ ಸಾಧನಕ್ಕೆ ಕೊಡಬಲ್ಲುದು ಎಂಬುದು ಮುಖ್ಯ.”

“ನೀನು ಯಾರನ್ನಾದರೂ ಹಿಂದೆ ನೊರೆಯಿಂದ ಹೊಡೆದು ಕೊಂದಿದ್ದೀಯಾ?”

“ನನಗೆ ಇದನ್ನು ಆಯುಧವಾಗಿ ಉಪಯೋಗಿಸಬಹುದು ಎಂದು ಹೊಳೆದೇ ಇಲ್ಲ. ನನಗೆ ಬೇಕಾದಷ್ಟು ಆಯುಧಗಳಿರುವಾಗ ಈ ನೊರೆಯನ್ನೇಕೆ ಆಯುಧವಾಗಿ ಉಪಯೋಗಿಸಲಿ ?”

“ಈಗ ನಾನು ಹೇಳುವೆನು. ಎಲ್ಲಿ ಇದನ್ನು ಎತ್ತಿ ಹೊಡೆ, ನೋಡೋಣ.”

“ಯಾರನ್ನು ಹೊಡೆಯಲಿ ?”

“ನನ್ನನ್ನೇ ಹೊಡೆ.”

ಇಂದ್ರನು ಎಚ್ಚರವಾದನು. ಇನ್ನೂ ಮಹಾವಿಷ್ಣುವಿನ ಅಪ್ಪಣೆಯಿಲ್ಲ ಅದರಿಂದ ನಕ್ಕನು. “ನೀನು ಮಾಡುವ ಕೆಲಸವನ್ನು ನೋಡು ವೃತ್ರೇಂದ್ರ. ನಾನು ಇದನ್ನು ಎತ್ತಿ ಹೊಡೆದೆನೆಂದಿಟ್ಟುಕೋ. ನೀನು ಯಾವ ಆಯುಧಕ್ಕೂ ಜಗ್ಗದವನು. ಇನ್ನು ಈ ನೊರೆಗೆ ಜಗ್ಗುವೆಯಾ ? ನಿನಗೆ ನಾನು ಹೊಡೆದರೂ ನೀನು ಸಾಯುವುದಿಲ್ಲ.