ಪುಟ:Mahakhshatriya.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮.ವರವೋ? ಶಾಪವೋ?

ವೃತ್ರನು ಹೋದನೆಂಬ ಸುದ್ದಿಯು ಅಮರಾವತಿಯಲ್ಲೆಲ್ಲ ಇರಲಿ, ಸ್ವರ್ಗಲೋಕದಲ್ಲೆಲ್ಲಾ ಮಿಂಚಿನ ವೇಗದಲ್ಲಿ ಹರಡಿತು. ಬರಿಯ ತರಗೆಲೆಗಳು ತುಂಬಿರುವ ಕಾಡಿನಲ್ಲಿ ಬೆಂಕಿಯು ಹರಡುವಂತೆ, ಒಣಗಿ ನಿಂತಿರುವ ಹುಲ್ಲಿನ ಕಾವಲು ಹೊತ್ತುಕೊಳ್ಳುವಷ್ಟು ವೇಗವಾಗಿ ಹರಡಿತು. ದಾನವರು ಹಾ ಹಾ ಎನ್ನುತ್ತ ಎದ್ದರು. ಅವರಿಗೆ ಅಮಲು ಇಳಿಯುವುದರಲ್ಲಿ, ಅನಿರೀಕ್ಷಿತವಾಗಿ, ಅಕಾರಣವಾಗಿ ಅವರು ತೇಜೋಹೀನರಾಗಿದ್ದಾರೆ. ಪಕ್ಕದಲ್ಲಿದ್ದ ಅಪ್ಸರೆಯರು ಕಾಣದಾಗಿದ್ದಾರೆ. ತೆರೆಯ ಹಿಂದೆ ಕುಳಿತು ಗಾನ ಮಾಡುತ್ತಿದ್ದ ಗಂಧರ್ವಗಣವು ಯಾವಾಗಲೋ ಓಡಿಹೋಗಿದೆ. ದಾನವೇಂದ್ರರಿದ್ದ ಅರಮನೆಗಳು ಏನೋ ಶೂನ್ಯವಾಗಿ, ಏನೋ ಬಿಕೋ ಎನ್ನುತ್ತ ಅವರನ್ನು ನೋಡಿ ಹಾಸ್ಯಮಾಡುವಂತೆ, ವಿಕಟವಾಗಿ ನಗುತ್ತಿರುವಂತೆ ಕಾಣುತ್ತಿವೆ. ಅವರ ವೃತ್ರನು ಸತ್ತನೆಂದು ನಂಬಲು ಹೊರಗಿನ ಸಾಕ್ಷ್ಯವೇನೂ ಬೇಕಿಲ್ಲ. ಅವರ ಹೃದಯವನ್ನು ಆವರಿಸಿರುವ ಶೂನ್ಯತೆ, ಅವರಿಗೆ ಹುಟ್ಟಿರುವ ಗಾಬರಿ, ಅದೇ ಹೇಳುತ್ತಿದೆ. ದಾನವೇಂದ್ರರಿಗೆ ದಿಗಿಲಾಗಿ, ಆದಷ್ಟು ಬೇಗ ಅಮರಾವತಿಯಿಂದ ಹೊರಟುಹೋಗಬೇಕು ಎನ್ನಿಸಿದೆ. ನಿಂತಿದ್ದವರು ಕುಳಿತು ಬಿದ್ದುಕೊಳ್ಳುವುದಿರಲಿ ನಿಂತಂತೆಯೇ ಕುಸಿದು ಬಿದ್ದಂತಾಗಿದೆ. ಕೆಟ್ಟ ಕನಸಾಗಿ ಯಾವುದೋ ಪಿಶಾಚವು ಓಡಿಸಿಕೊಂಡು ಬರುತ್ತಿದ್ದರೆ, ಓಡುವುದಕ್ಕೆ ಕಾಲೂ ಬರದೆ ಇದ್ದಾಗ ಆಗುವಷ್ಟು ಭೀತಿಯಾಗಿ, ಅವರು ಅಲ್ಲಿಂದ ಏಳಲೂಲಾರರು, ಅಲ್ಲಿ ಇರಲೂಲಾರರು ಎನ್ನುವಂತಾಗಿದೆ.

ದೇವತೆಗಳು ಕುಣಿಯುತ್ತಿದ್ದಾರೆ. ಅವರ ಉತ್ಸಾಹವು ಏನು ! ಅಖಂಡವಾಗಿ ವೃಷ್ಟಿಯಾಯಿತೋ ಎನ್ನುವಂತೆ ಗಳಿಗೆಗಳಿಗೆಗೂ ಹೆಚ್ಚುತ್ತಿದೆ. ಎಲ್ಲರೂ, ಅಪ್ಸರೋಗಣಗಳು, ಗಂಧರ್ವರ ಗುಂಪುಗಳು, ಚಾರಣರ ತಂಡಗಳು, ಎಲ್ಲರೂ ಸೇರಿ ಇಂದ್ರವಿಜಯವನ್ನು ಹಾಡುತ್ತಿದ್ದಾರೆ. ಯಾವ ಯಾವ ದಾನವೇಂದ್ರರ ಅರಮನೆಯ ಮುಂದೆ ದೇವತೆಗಳು ಸುಳಿಯುವುದಕ್ಕೂ ಭೀತಿಪಡುತ್ತಿದ್ದರೋ, ಅಲ್ಲಿ ದೇವತೆಗಳು ಹಾವಳಿ ಮಾಡುತ್ತಿದ್ದಾರೆ. ವೃತ್ರೋತ್ಸವವೆಂದು ಬೆಳಗ್ಗೆ ದಾನವರು ಹಾರಾಡಿದ್ದುದನ್ನೆಲ್ಲ ನೆನೆಸಿಕೊಂಡು, ಅವರನ್ನು ಅಣಕಿಸುವಂತೆ ದೇವತೆಗಳು