ಪುಟ:Mahakhshatriya.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕುಣಿಯುತ್ತಿದ್ದಾರೆ. ಅಷ್ಟೇನು? ಸ್ವರ್ಗಲೋಕದ ಜಡಭೂಮಿಯೆಲ್ಲ ಸಂತೋಷದಿಂದೆದ್ದು ಕುಣಿಯುತ್ತಿರುವಂತೆ, ಆ ಸಂತೋಷವನ್ನು ಹುಲ್ಲಿನಿಂದ ಹಿಡಿದು ಕಲ್ಪವೃಕ್ಷದವರೆಗೆ, ಸಸ್ಯವರ್ಗವೆಲ್ಲವೂ ಅನುಮೋದಿಸಿ ತಾನೂ ನರ್ತನ ಭಾಗಿಯಾಗಿರುವಂತೆ ಆಗಿದೆ. ಅಷ್ಟೇನು? ಅರಮನೆಗಳಲ್ಲಿರಲಿ, ಇತರ ದೇವಮಂದಿರಗಳಲ್ಲಿಯೂ, ಗೋಡೆ, ಕಿಟಕಿ, ಕಂಬ, ಬಾಗಿಲುಗಳು ಮೊದಲುಗೊಂಡು ಆ ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದಂತಿವೆ.

ಶುಕ್ರಾಚಾರ್ಯನು ಉತ್ತಮೋತ್ತಮವಾದ ಸುರೆಯನ್ನು ಪಾನಮಾಡಿ ಮತ್ತನೋ ಮತ್ತನಾಗಿ ಮಂಚದ ಮೇಲೆ ಮಲಗಿದ್ದನು. ಏಕೋ ಏನೋ ಥಟ್ಟನೆ ಎಚ್ಚರವಾಯಿತು. ಏನೋ ಸರ್ವನಾಶವಾದ ಒಂದು ಭಾವವು ಆ ಮಂದಿರವನ್ನೆಲ್ಲ ತುಂಬಿ ಬಲವಂತವಾಗಿ ಆತನ ಹೃದಯವನ್ನು ಪ್ರವೇಶಿಸಿದಂತಿದೆ. ಪ್ರಹರಿಯನ್ನು ಕರೆದು ‘ಏನು ಸುದ್ದಿ?’ ಎನ್ನುತ್ತಾನೆ. ಪ್ರಹರಿಯು ಅಳುತ್ತ ಬಿಕ್ಕಳಿಸುತ್ತ ವೃತ್ರ ವಧದ ಸುದ್ದಿಯನ್ನು ತಿಳಿಸುತ್ತಾನೆ. ಶುಕ್ರಾಚಾರ್ಯನು ಎಚ್ಚರಕ್ಕಿಂತಲೂ ಎಚ್ಚರವಾಗಿ ‘ಏನು?’ ಎಂದು ಮಂಚದಿಂದ ಒಂದೇ ಹಾರಿಗೆ ಹಾರಿ ಕೆಳಕ್ಕೆ ಬಂದು, ಪ್ರಹರಿಯನ್ನು ಹಿಡಿದು ಕುಲುಕುತ್ತಾ. “ಏನಂದೆ? ಇನ್ನೊಂದು ಸಲ ಹೇಳು” ಎಂದು ಎಲ್ಲವನ್ನೂ ಮತ್ತೆ ಕೇಳುತ್ತಾನೆ.

ಶುಕ್ರಾಚಾರ್ಯನು ಅಲ್ಲಿಯೇ ಇದ್ದ ಅಸನದಲ್ಲಿ ಧೊಪ್ಪನೆ ಬಿದ್ದುಕೊಂಡು ಏನಾಗಿದೆ ಎಂಬುದನ್ನು ತನ್ನ ದಿವ್ಯದೃಷ್ಟಿಯಲ್ಲಿ ನೋಡುತ್ತಾನೆ. ಚಿತ್ರಪಟದಲ್ಲಿ ತೋರುವಂತೆ ನಡೆದುದೆಲ್ಲವೂ ಮತ್ತೆ ಕಾಣುತ್ತದೆ. “ಹಾಗಾದರೆ ಇಂದ್ರನದೇನು ತಪ್ಪಿಲ್ಲ. ನೀನಾಗಿ ಬಲವಂತ ಮಾಡಿ ಅವನಿಂದ ಏಟು ತಿಂದು ಸತ್ತಿದ್ದೀಯೆ. ಅಯ್ಯೋ ! ವೃತ್ರ, ನಿನಗೇಕೆ ಈ ದುರ್ಬುದ್ಧಿ ಬಂತು? ಅಥವಾ ಈ ದಿನ ಬೆಳಿಗ್ಗೆ ನಾನೇಕೆ ಏನಾಗಬಹುದು ಎಂಬುದನ್ನು ನೋಡಲಿಲ್ಲ? ಅಯ್ಯೋ, ಸುರಾ ಮೋಹವೇ ನೀನು ಎಂತಹ ಕೈಕೊಟ್ಟೆ ! ನಾನೇಕೆ ಇಂದು ಈ ಅಸುರಸ್ವಭಾವಕ್ಕೆ ವಶನಾದೆ? ಅಥವಾ ನನ್ನನ್ನು ಮೋಸಮಾಡಿ ನಿಯತಿಯು ಈ ಕಾರ್ಯವನ್ನು ಸಾಧಿಸಿತೋ? ಇರಬೇಕು. ಕಾಲಸ್ವರೂಪನಾದ ಆ ವಿಷ್ಣುವು ಇದನ್ನು ಸಾಧಿಸಿರಬೇಕು. ಹಿಂದೆ ನಮ್ಮ ಪಿತಾಮಹಿಯು ಶಾಪಕೊಟ್ಟಂತೆ ನಾನೂ ಶಾಪಕೊಡಲೇ? ಅಪರಾಧವಿಲ್ಲದೆ ಶಾಪವನ್ನೆಂತು ಕೊಡಲಿ?” ಎಂದು ಕಣ್ಣಿಂದ ನೀರು ಧಾರಾಳವಾಗಿ ಸುರಿಯುತ್ತಿರಲು, ಒಂದು ಗಳಿಗೆ ಮೌನವಾಗಿ ಕುಳಿತಿದ್ದನು.

ಮತ್ತೆ ತನ್ನಷ್ಟಕ್ಕೆ ತಾನೇ ನುಡಿದುಕೊಂಡನು : ಸಂಜೀವಿನಿ ವಿದ್ಯಾಬಲದಿಂದ ಅವನನ್ನು ಬದುಕಿಸೋಣವೆಂದರೆ, ಆ ಶರೀರವನ್ನು ರಚಿಸಿದ್ದ ಪಂಚಭೂತಗಳೆಲ್ಲ