ಪುಟ:Mahakhshatriya.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಘಟಿತವಾಗಿ ಹೋಗಿವೆ. ಇನ್ನು ಉಳಿದಿರುವುದು ಅಂತಃಕರಣ ವಿಶಿಷ್ಟವಾದ ಆ ವೃತ್ರನ ನಾಮವೊಂದು. ಅದಕ್ಕೆ ಬಲವನ್ನು ಕೊಟ್ಟರೂ ಅದು ವಿಕಾರವಾದ ರೂಪವನ್ನು ಮಾತ್ರ ಪಡೆಯಬಲ್ಲದು. ಮತ್ತೆ ತ್ವಷ್ಟೃವಿನ ಬಳಿ ಸಾರಬಾರದೇಕೆ ? ನಾನು ಹೋಗಬಾರದು. ಆತನೇ ಸೃಷ್ಟಿಸಿದ ಕೃತ್ಯವನ್ನೇ ಕಳುಹಿಸೋಣ, ಆತನು ಬೇಕೆಂದರೆ ಮತ್ತೆ ಅದಕ್ಕೆ ರೂಪವನ್ನು ಕೊಡಬಲ್ಲ” ಎಂದು ಮಂತ್ರಪುನಶ್ಚರಣ ಮಾಡಿ, ಆ ಪ್ರೇತವನ್ನು ಕರೆದನು. ಸೂಕ್ಷ್ಮವಾದ ರೂಪದಲ್ಲಿ ಪ್ರೇತವು ಬಂತು.

ಶುಕ್ರನೇ ಮೊದಲು ಮಾತನಾಡಿಸಿದನು ; “ಏನು ವೃತ್ರ ? ಏಕೆ ಹೀಗೆ ಮಾಡಿದೆ ?”

ಪ್ರೇತವು ನುಡಿಯಿತು ; “ಆಚಾರ್ಯ, ಅದೇಕೆ ಹೀಗೆ ಮಾಡಿದೆನೆಂದು ನನಗೂ ತಿಳಿಯದು, ಇಂದ್ರನು ಬೇಡಬೇಡವೆಂದರೂ ಬಿಡದೆ, ನಾನೇ ಬಲವಂತ ಮಾಡಿ ಅವನಿಂದ ಹೊಡೆಸಿಕೊಂಡೆ. ಆದರೆ, ಆಚಾರ್ಯ, ಇಂದ್ರನದೊಂದು ಅಪರಾಧವಿದೆ, ಒಂದು ದ್ರೋಹವಿದೆ. ಯಾವುದೋ ಅಜ್ಞಾತವಾದ ಆಯುಧವು ಅದರಲ್ಲಿತ್ತು. ನಾನು ನೊರೆಯಿಂದ ಹೊಡೆ ಎಂದೆ ದಿಟ. ಆದರೆ ಅದರಲ್ಲಿ ಆಯುಧವಿತ್ತು. ಅದೇ ನನ್ನನ್ನು ಕೊಂದುದು. ಮುಖ್ಯ ಎಲ್ಲವೂ ಸೇರಿತು. ನನಗೆ ಸೋಲಾಗಿ ಸಾಯುವ ಕಾಲ ಬಂದಿತು.”

ಶುಕ್ರಾಚಾರ್ಯನು ಕೇಳಿದನು ; “ಈಗ ಏನು ಮಾಡಬೇಕೆಂದಿರುವೆ ?”

“ಸಾಧ್ಯವಾದರೆ, ಆ ಇಂದ್ರನನ್ನು ಹಿಡಿದು ಬಾಯಿಗೆ ಹಾಕಿಕೊಂಡು ಅಗಿದು ಬಿಟ್ಟೇನು. ನಾನಿನ್ನೂ ಸತ್ತಿಲ್ಲ. ಆದರೆ, ಪಂಚಭೂತಗಳನ್ನು ಕೊಟ್ಟು ನನಗೆ ಶರೀರವನ್ನು ಕೊಡುವವರು ಬೇಕಲ್ಲ ? ಅದಿಲ್ಲದೆ, ನಾನು ಏನು ಮಾಡಲಿ? ಗಳಿಗೆ ಗಳಿಗೆಗೂ ಒಂದೊಂದು ರೂಪ ಮಾಡಿಕೊಂಡು ಅವನನ್ನು ಹೆದರಿಸಿ ಹೆದರಿಸಿ ಸಾಯಿಸಬೇಕು, ಅಷ್ಟೇ”

“ಹುಂ ! ದಾನವ ಸಾಮ್ರಾಜ್ಯವು ಕಲ್ಪಾಂತಸ್ಥಾಯಿಯಾಗುವುದೆಂದು ನಾನು ಹಿಗ್ಗುತ್ತಿದ್ದೆ, ಏನೋ ಮೋಸವಾಯಿತು. ಆಗಲಿ, ನನ್ನ ಉಪದೇಶದಿಂದ ನೀನಿನ್ನೂ ಕರಗದಿರುವೆ. ಈಗಲೂ ನನ್ನ ಮಾತು ಕೇಳು, ತ್ವಷ್ಟೃವನ್ನೇಕೆ ಹೋಗಿ ಕೇಳಬಾರದು! ನೀನೇ ಹೋಗಿ ಆತನನ್ನು `ನನಗೆ ಭೌತಿಕ ದೇಹವನ್ನು ಕೊಡು’ ಎನ್ನು”

ಶುಕ್ರಾಚಾರ್ಯನಿಗೆ ಎಡಗಣ್ಣು ಅದುರಿತು. ಕೂಡಲೇ ಹೇಳಿದನು : “ಶಕುನವು ಚೆನ್ನಾಗಿಲ್ಲ. ತಡೆ, ನಾನೇ ಸ್ವತಂತ್ರಿಸಿ ಸರಸ್ವತಿಯನ್ನು ಕರೆದು ಕೇಳುವೆನು. ನೀನು ಹೇಗೆ ಸತ್ತೆ ಎಂದು ತಿಳಿಯುವೆನು” ಶುಕ್ರನು ಧ್ಯಾನಸ್ಥನಾದನು, ಸರಸ್ವತಿಯು ಬಂದಳು. ಶುಕ್ರನು ಕೇಳಿದನು : “ದೇವಿ, ಇಂದ್ರಶತ್ರುವಾಗಬೇಕೆಂದಲ್ಲವೆ ತ್ವಷ್ಟೃವು