ಒಂದೆರಡು ಮೂಟೆ ಪುರಿ, ಒಂದು ಮೂಟೆ ನೆನೆದವರೆಕಾಳು ಎಲ್ಲಾ ತಂದಿರಿ.”
“ಸರಿ ಕಣಪ್ಪಾ !”
“ಪೂಜೆ ಯಾರು ಮಾಡೋರು ?”
“ಯಜಮಾನ !”
“ಅದಕ್ಕಲ್ಲಾ ! ಪೂಜೆ ಮಾಡೋರು ಮಡಿಯಾಗಿ ಏನೂ ತಿನ್ನದೆ ಬರಬೇಕಲ್ಲಾ ಅದಕ್ಕೆ ಅಂಗಂದೆ !”
“ನೀನೂ ಅತ್ತೇ ಇಬ್ಬರೂ ಬನ್ನಿ ಇಲ್ಲೇ ತಾನಾಗೀನಾ ಮಾಡ್ಕೊಂಡು ಗಂಗಮ್ಮನ ಪೂಜೆ ಮಾಡಿ, ನಮ್ಮನ್ನೆಲ್ಲಾ ಅರಸಿ ಕಳಿಸಿಕೊಡಿ.”
“ಸರಿ, ದೋಣಿ, ಬಲೆ, ಪೂಜೆಗೆ ಬೇಕಾದ್ದು ಎಲ್ಲಾ ನೋಡ್ಕೊಂಡು ನಾಳೆಯೇ ಅಣಿ ಮಾಡ್ಕೊಳ್ಳಿ. ಅಣಗಿನ ಬೇಕೋ ? ಅದೆಯೋ ?”
“ನಾವೇ ನೋಡಿಕೋತೀವಿ. ಬುಡು ಮಾವಾ !”
“ನೋಡ್ದೆಯಾ ನಿಮ್ಮ ಬುದ್ದೀಯಾ ? ಮುದುಕ ಅವ್ನಲ್ಲಾ ಅನ್ನೋ ಮಾತೇ ಇಲ್ವಲ್ಲಾ ? ನೀವು ನೀವೇ ನೋಡ್ಕೋಂಡ್ರೆ ನಾಳೆ ಲೆಕ್ಕಾಚಾರದಲ್ಲಿ ಎಚ್ಚು ಕಡಿಮೆ ಆದ್ರೆ ? ಅದೆಲ್ಲಾ ಬೇಡ. ಮನೇಲಿ ಏಳಿಟ್ಟಿರ್ತಿನಿ. ಏಟು ಬೇಕಾಯ್ತದೋ ಓಟು ತಕೊಂಡೋಗಿ ಆಮೇಲೆ ಕೊಟ್ಟುಬಿಡಿ.”
“ಅಂಗೂ ಆಗಲಿ ಕಣಪ್ಪ”
ಬೆಸ್ತಪಡೆಯು ಯಜಮಾನನೊಡನೆ ಅಲ್ಲಿಂದ ಜಾರಿತು.
ಹುಣ್ಣಿಮೆಯ ದಿನ ಇನ್ನೇನು ಮಧ್ಯಾಹ್ನಕ್ಕೆ ಬಂದಿದೆ.ಬ್ರಾಹ್ಮಣರು ಆಗಲೇ ಮಾಧ್ಯಾಹ್ನಿಕವನ್ನು ಮಾಡುತ್ತಿದ್ದಾರೆ. ಎಷ್ಟೋ ಜನ ಕತ್ತೆತ್ತಿಕೊಂಡು ಸೂರ್ಯ ತೇಜಸ್ಸಿನಿಂದ ಲೋಕಾನುಗ್ರಹಾರ್ಥವಾಗಿ ಪ್ರಾಣಶಕ್ತಿಯನ್ನು ಸಂಗ್ರಹಿಸುತ್ತಿದ್ದಾರೆ. ಇನ್ನೆಷ್ಟೋ ಜನ ದೇವರ್ಷಿ ಪಿತೃತೃಪ್ತ್ಯರ್ಥವಾಗಿ ತರ್ಪಣಗಳನ್ನು ಬಿಡುತ್ತಿದ್ದಾರೆ. ಅಲ್ಲಲ್ಲಿ ಹೊತ್ತಾಗಿ ಬಂದ ಹೆಂಗಸರು ಗಂಗಾಪೂಜೆಯನ್ನು ಮಾಡಿ ಬಾಗಿನ ಕೊಟ್ಟು ಅವಸರವಸರವಾಗಿ ಹೊರಡುತ್ತಿದ್ದಾರೆ. ಬಿಸಿಲು ಬಲವಾಗಿದೆ.
ಬೆಸ್ತರ ಗುಂಪು ಯಜಮಾನನನ್ನು ಮುಂದುಮಾಡಿಕೊಂಡು ತಲೆಯ ಮೇಲೆ ಬುಟ್ಟಿಗಳನ್ನು ಹೊತ್ತು ಅಲ್ಲಿಗೆ ಬಂತು. ಯಜಮಾನನೂ ಹೆಂಡತಿಯೂ ಸ್ನಾನ ಮಾಡಿದರು, ಮಿಕ್ಕವರೂ ಮಾಡಿದರು. ಆ ದಂಪತಿಗಳು ಪೂಜೆಯನ್ನು ಸಾಂಗವಾಗಿ ಮಾಡಿ ಕುಲದವರು ತಂದಿದ್ದ ಬಲಿಗಳನ್ನೆಲ್ಲಾ ಗಂಗಾದೇವಿಗೆ ಸಮರ್ಪಣ ಮಾಡಿದರು. ಕುಲದವರೂ ತಾವು ತಾವು ತಂದಿದ್ದ ಬುತ್ತಿಗಳನ್ನು ಗಂಗಮ್ಮನಿಗೆ ನಿವೇದನ ಮಾಡಿ ಮೊದಲ ತುತ್ತು ಗಂಗಮ್ಮನಿಗೆಂದು ನೀರಿಗೆಸೆದು,