ಪುಟ:Mahakhshatriya.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂದೇಹವಿಲ್ಲ ಅಂತೂ ತೊಳೆದರು. ದಡದ ಮೇಲಕ್ಕೆ ತಂದರು. ಬದುಕಿದ್ದಾನೆ. ಉಸಿರಿಲ್ಲದಿದ್ದರೂ ಬಿಸಿಯಿದೆ.

ಯಜಮಾನನಿಗೆ ವರದಿ ಹೋಯಿತು. ಅವನೂ ಓಡೋಡುತ್ತ ಬಂದನು. ಮರಳಿನ ಮೇಲೆ ಮಲಗಿಸಿದ್ದ ಮರಳಿನ ಬಿಸಿ ತಗುಲಿತೋ ? ಅಥವಾ ಸಂಜೆಯ ಬಿಸಿಲೇ ಆ ದೇಹದೊಳಕ್ಕೆ ಪ್ರಾಣಶಕ್ತಿಯನ್ನು ತುಂಬಿತೋ ? ಅಂತೂ ಉಸಿರಾಡಿತು. ಚೈತನ್ಯವು ಕೂಡಿಕೊಂಡಿತು. ಕಣ್ಣು ತೆರೆಯಿತು. ಇನ್ನೊಂದು ಗಳಿಗೆಯೊಳಗಾಗಿ ದೇಹವು ಎದ್ದು ಕುಳಿತುಕೊಂಡಿತು. ನಿದ್ದೆಯಿಂದ ಎದ್ದವನಂತೆ ಸಮಾಧಾನದಿಂದ ಸುತ್ತಲೂ ನೋಡಿ, ಎದಿರು ಬಿದ್ದಿದ್ದ ಗುಡ್ಡದಂತಹ ಮೀನಿನ ರಾಶಿಯನ್ನು ನೋಡಿ ತಲೆಯಲ್ಲಾಡಿಸಿ, ಎರಡು ಕಡೆಯೂ ಹರಿಯುತ್ತಿರುವ ಗಂಭೀರಪ್ರವಾಹಗಳಿಗೆ ಕೈ ಮುಗಿದು, ಎದ್ದುಹೋಗಿ ಆಚಮನ ಮಾಡಿ ಬಂದು ಪದ್ಮಾಸನದಲ್ಲಿ ಕುಳಿತನು. ಕುಳಿತುಕೊಳ್ಳುವ ರೀತಿಯಿಂದಲೇ ಯಜಮಾನನಿಗೆ ಈತನು ತಪಸ್ವಿ ಇರಬೇಕು ಎನ್ನಿಸಿತು. ತಾನು ಹೊದೆದಿದ್ದ ಕಂಬಳಿಯನ್ನು ಹಾಸಿ ಸಾಷ್ಟಾಂಗವಾಗಿ ಭೂಮಿಯಲ್ಲಿ ಮಲಗಿ ನಮಸ್ಕಾರ ಮಾಡಿ “ದಯಮಾಡಬೇಕು, ಈ ಕಂಬಳಿಯ ಮೇಲೆ ಮೂರ್ತಿಮಾಡಬೇಕು” ಎಂದನು. ಜಲವಾಸಿಯು ದರ್ಭೆಯನ್ನು ತೋರಿಸಲು ಎಲ್ಲರೂ ಓಡಿ ಹೋಗಿ ಒಂದು ಹೊರೆ ದರ್ಭೆಯನ್ನು ಕೊಯ್ದು ತಂದರು. ಅದರಲ್ಲಿ ಎರಡು ಗರಿಯನ್ನು ತೊಡೆಯ ಕೆಳಗೆ ಹಾಕಿಕೊಂಡು, ಎರಡನ್ನು ಬೆರಲಿಗೆ ಸಿಕ್ಕಿಸಿಕೊಂಡು ಆತನು ಆ ಹೊರೆಯನ್ನು ಒರಗಿಕೊಂಡು ಕುಳಿತನು. ಎಲ್ಲರೂ ಪದೇಪದೇ ನಮಸ್ಕಾರ ಮಾಡಿದರು. ಎಲ್ಲರೂ ಕಣ್ಣುತುಂಬಾ ನೀರಿಟ್ಟುಕೊಂಡಿದ್ದಾರೆ. ಒಬ್ಬರಿಗಾದರೂ ಮಾತನಾಡಲು ಧೈರ್ಯವಿಲ್ಲ. ಎಲ್ಲರೂ ಕೈಮುಗಿದುಕೊಂಡು ಸುತ್ತಲೂ ನಿಂತಿದ್ದಾರೆ.

ವ್ಯಕ್ತಿಯು ತೇಜೋಮಯವಾದ ಕಣ್ಣುಗಳನ್ನು ಅರಳಿಸಿ ಸಣ್ಣ ದನಿಯಲ್ಲಿ “ಈಗ ಇಲ್ಲಿ ಆಳುತ್ತಿರುವ ದೊರೆ ಯಾರು ?” ಎಂದು ಕೇಳಿದನು. ಯಜಮಾನನು ಭಯಭಕ್ತಿಗಳಿಂದ “ನಹುಷಚಕ್ರವರ್ತಿ” ಎಂದು ಅರಿಕೆ ಮಾಡಿದನು. ``ಆತನಿಗೆ ಸುದ್ದಿಯನ್ನು ತಿಳಿಸಿ” ಎಂದು ಹೇಳಿ ವ್ಯಕ್ತಿಯು ಮತ್ತೆ ಧ್ಯಾನಾಸಕ್ತವಾಯಿತು.

ಒಂದು ಗಳಿಗೆಯೊಳಗಾಗಿ ಚಕ್ರವರ್ತಿಯು ಸಪರಿವಾರನಾಗಿ ಬಂದನು. ಆತನ ಜೊತೆಯಲ್ಲಿಯೇ ಬಂದಿದ್ದ ರಾಜಪುರೋಹಿತನು ವಿಧ್ಯುಕ್ತವಾಗಿ ಪೂಜೆಯನ್ನು ಮಾಡಿ ಮಧುಪರ್ಕವನ್ನು ಒಪ್ಪಿಸಿದನು. ಚತುರ್ವೇದಗಳನ್ನೂ ಸಾಂಗವಾಗಿ ಅಧ್ಯಯನಮಾಡಿದ ಮಹಾಬ್ರಾಹ್ಮಣನಿಗೆ ಮಾತ್ರ ಸಲ್ಲುವ ಆ ಮರ್ಯಾದೆಯನ್ನು ಅದಕ್ಕೆ ಅರ್ಹನಾದವನಂತೆ, ಆ ಅಭ್ಯಾಸವಿರುವವನಂತೆ, ಆ ವ್ಯಕ್ತಿಯು