ವಿಷಯಕ್ಕೆ ಹೋಗು

ಪುಟ:Mahakhshatriya.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂಗೀಕರಿಸಿದನು. ಅದೆಲ್ಲ ಆದಮೇಲೆ ನಹುಷನು ಪ್ರವರೋಚ್ಚಾರಣಪೂರ್ವಕವಾಗಿ ನಮಸ್ಕರಿಸಿ, “ದೇವಾ, ತಾವು ಯಾವ ಪಾವನ ವಂಶದವರು? ತಮ್ಮ ನಾಮಧೇಯವೇನು?” ಎಂದು ವಿನಯವಾಗಿ ವಿಚಾರಿಸಿದನು. ಆ ತಪಸ್ವಿಯು “ಭಾರ್ಗವನು ನಾನು. ಚ್ಯವನನೆಂದು ಕರೆಯುವರು. ನಾನು ಈ ಗಂಗಾಯಮುನಾ ಸಂಗಮದಲ್ಲಿ ಜಲಸ್ತಂಭನ ಮಾಡಿ ತಪಸ್ಸು ಮಾಡಿಕೊಂಡಿದ್ದೆನು. ದೈವಪ್ರೇರಿತರಾದ ಇವರು ಈ ದಿನ ಮೀನು ಹಿಡಿಯುವಾಗ ನನ್ನನ್ನು ದಡಕ್ಕೆ ಎಳೆದುಹಾಕಿದರು. ಅದರಿಂದ ಮೊದಲು ಇವರ ಋಣವನ್ನು ತೀರಿಸಿ, ಇವರಿಗೆ ಏನು ಸಲ್ಲಬೇಕೋ ಅದನ್ನು ಸಲ್ಲಿಸಿ ನನ್ನನ್ನು ಬಿಡಿಸಿಕೊ. ಬೆಲೆ ಎಷ್ಟು ಎಂಬುದನ್ನು ನಿನ್ನ ಸ್ವಬುದ್ಧಿಯಿಂದಲೇ ನಿಶ್ಚಯಿಸು” ಎಂದನು.

ತಪಸ್ಸು ಮಾಡುತ್ತಿದ್ದವನನ್ನು ತಾವು ಎಳೆದರು, ಎಂದು ಕೇಳಿದ ಕೂಡಲೇ ಅಲ್ಲಿ ನೆರೆದಿದ್ದ ಬೆಸ್ತರೆಲ್ಲಾ ನಡುಗಿ ಹೋದರು. ಚ್ಯವನ-ನಹುಷರಿಬ್ಬರಿಗೂ ನಮಸ್ಕಾರ ಮಾಡಿ, “ತಿಳಿಯದೆ ಮಾಡಿದ ತಪ್ಪು ಮನ್ನಿಸಬೇಕು” ಎಂದು ಗೋಗರೆದುಕೊಂಡರು. ಚ್ಯವನನು ನಗುನಗುತ್ತಾ ಅಭಯಪ್ರಧಾನ ಮಾಡಿದನು. ನಹುಷನು ತಾನುಳಿದುಕೊಂಡೆನೆಂದು ಸಂತೊಷಪಟ್ಟುಕೊಂಡು ‘ದೇವಾ, ತಮ್ಮ ಬೆಲೆಯಾಗಿ ಸಾವಿರ ಚಿನ್ನದ ನಾಣ್ಯಗಳನ್ನು ಕೊಡಲೇ?” ಎಂದು ಕೇಳಿದನು, ಚ್ಯವನನು “ನಿನ್ನ ಮಂತ್ರಿಗಳನ್ನು ಕೇಳು” ಎಂದನು. ಅರಸನು ಮಂತ್ರಿಗಳನ್ನು ವಿಚಾರಿಸಿ “ನೂರು ಸಾವಿರ” ಎಂದನು.

ಚ್ಯವನನಿಗೆ ಅಸಮಾಧಾನವಾಗಿ “ಬ್ರಾಹ್ಮಣರನ್ನು ವಿಚಾರಿಸು” ಎಂದನು. ಅರಸನು ರಾಜಪುರೋಹಿತನ ಮುಖವನ್ನು ನೋಡಲು, ಆತನು “ಪ್ರಭು, ಬ್ರಾಹ್ಮಣನ ಬೆಲೆಯಿಷ್ಟೆಂದು ಎಲ್ಲೂ ಹೇಳಿಲ್ಲ. ಶ್ರೋತ್ರೀಯನಾಗಿ, ಮಧುಪರ್ಕಕ್ಕೆ ಅರ್ಹನಾದ ಭಗವಂತನಿಗೆ ಏನು ಕೊಟ್ಟರೂ ಸಾಲದು” ಎಂದನು. ಅರಸನು “ಅರ್ಧ ರಾಜ್ಯವನ್ನು ಕೊಡಲೇ?” ಎಂದು ಕೇಳಿದನು. ಚ್ಯವನನು ಅಸಮಾಧಾನಪಡುತ್ತ ಸುತ್ತಲೂ ನೋಡಿ ಸಂಧ್ಯಾಘರ್ಯ್‌ವನ್ನು ಕೊಡುತ್ತಿರುವ ಋಷಿಯೊಬ್ಬನನ್ನು ದೂರದಲ್ಲಿ ಕಂಡು, “ಆತನನ್ನು ವಿಚಾರಿಸು” ಎಂದನು.

ಚಕ್ರವರ್ತಿಯು ತಾನೇ ಅಲ್ಲಿಗೆ ಹೋಗಿ ಆತನಿಗೆ ನಮಸ್ಕಾರ ಮಾಡಿ “ಭಗವಾನ್ ನನ್ನ ಧರ್ಮಸಂಕಟವನ್ನು ಪರಿಹರಿಸಿ ಕಾಪಾಡಬೇಕು?” ಎಂದನು. ಅತನು ಎಲ್ಲವನ್ನೂ ವಿಚಾರಿಸಿ “ಅರಸ, ಬೆಲೆಯಿಲ್ಲದ ವಸ್ತುವನ್ನು ಬೆಲೆಯಿಲ್ಲದ ವಸ್ತುವಿನಿಂದಲೇ ಕೊಂಡುಕೋ. ಮನುಷ್ಯರಲ್ಲಿ ಬ್ರಾಹ್ಮಣನಿಗೆ ಬೆಲೆಯಿಲ್ಲ. ಪ್ರಾಣಿಗಳಲ್ಲಿ ಗೋವಿಗೆ ಬೆಲೆಯಿಲ್ಲ. ಅದರಿಂದ ಬ್ರಾಹ್ಮಣನನ್ನು ತಿಳಿದವರು